ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಖಾಸಗಿ ಶಾಲಾ ಶಿಕ್ಷಕರು

ಲಾಕ್‌ಡೌನ್‌ ಪರಿಣಾಮ: ಕಳೆದ ನಾಲ್ಕು ತಿಂಗಳಿಂದ ಆಗಿಲ್ಲ ಸಂಬಳ
Last Updated 28 ಜೂನ್ 2020, 7:43 IST
ಅಕ್ಷರ ಗಾತ್ರ

ವಿಜಯಪುರ:ಲಾಕ್ ಡೌನ್ ಘೋಷಣೆಯಾದ ನಂತರ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದ ಶಿಕ್ಷಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಉನ್ನತ ವ್ಯಾಸಂಗ ಮಾಡಿದ್ದರೂ ಹಲವಾರು ಕಾರಣಗಳಿಂದಾಗಿ ಸರ್ಕಾರಿ ಉದ್ಯೋಗ ಸಿಗದಿದ್ದರಿಂದ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯೆ ಕಲಿಸುತ್ತಿರುವ ಶಿಕ್ಷಕರು, ನಾಲ್ಕು ತಿಂಗಳಿನಿಂದ ವೇತನವಿಲ್ಲದೇ ಮನೆ ಬಾಡಿಗೆ, ಕುಟುಂಬ ನಿರ್ವಹಣೆ, ಆರೋಗ್ಯ ಸುಧಾರಣೆ ಸೇರಿದಂತೆ ಜೀವನ ನಡೆಸಲು ಪರದಾಡುತ್ತಿದ್ದಾರೆ.

ಸರ್ಕಾರವು ಕಾರ್ಮಿಕ ವರ್ಗ, ಆಟೊ ಚಾಲಕರು, ನೇಕಾರರು ಸೇರಿದಂತೆ ಹಲವು ವರ್ಗಗಳ ನೆರವಿದೆ ಧಾವಿಸಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಶಿಕ್ಷಕ ವೃತ್ತಿಯನ್ನೆ ನಂಬಿಕೊಂಡಿರುವ, ಅಲ್ಲಿ ಸಿಗುವ ಅಲ್ಪ ಸಂಬಳದಲ್ಲೇ ಬದುಕು ಕಟ್ಟಿಕೊಂಡಿರುವವರ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು, ಮೊದಲು ಎರಡು ತಿಂಗಳ ಕಾಲ ವೇತನ ನೀಡಿದ್ದಾರೆ. ಕೆಲವು ಶಾಲೆಗಳಲ್ಲಿ ಅರ್ಧ ಸಂಬಳ ಕೊಡಲಾಗಿದೆ, ಬಹುತೇಕ ಶಿಕ್ಷಕರು ಬಾಡಿಗೆ ಮನೆಗಳಲ್ಲೇ ವಾಸಮಾಡಿಕೊಂಡಿದ್ದಾರೆ. ಅರ್ಧ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಾಗದೇ ಸಾಲ ಮಾಡುತ್ತಿದ್ದಾರೆ. ಕೆಲವು ಶಿಕ್ಷಕರು ಈ ವೃತ್ತಿಯನ್ನು ಬಿಟ್ಟು ಬೇರೆನಾದರೂ ಕೆಲಸ ಹುಡುಕಿಕೊಳ್ಳೋಣ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನು ಕೆಲವರು ಶಿಕ್ಷಕ ವೃತ್ತಿಯನ್ನು ಬಿಟ್ಟು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಖಾಸಗಿ ಶಾಲೆಯ ಶಿಕ್ಷಕಿ ವಾಣಿಶ್ರೀ ಮಾತನಾಡಿ, ಬಾಡಿಗೆ ಮನೆಯಲ್ಲಿದ್ದೇವೆ. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಸರ್ಕಾರ, ನಮ್ಮಂಥವರ ಪರಿಸ್ಥಿತಿ ಬಗ್ಗೆಯೂ ಆಲೋಚನೆ ಮಾಡಬೇಕು. ಬೇರೆ ಎಲ್ಲರ ನೆರವಿಗೆ ಬಂದಂತೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತಿಂಗಳಿಗೆ ₹ 10 ಸಾವಿರ ಸಹಾಯಧನ ನೀಡಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಖಾಸಗಿ ಶಾಲೆಯ ಶಿಕ್ಷಕಿ ಪ್ರಮೀಳಾ ಪಾಯ್ಸ್ ಮಾತನಾಡಿ, ಲಾಕ್ ಡೌನ್ ಜಾರಿಯಾದ ನಂತರ ಸಾಕಷ್ಟು ಮಂದಿ ಖಾಸಗಿ ಶಾಲೆಗಳ ಶಿಕ್ಷಕರು, ತುಂಬಾ ಕಷ್ಟದಲ್ಲಿದ್ದಾರೆ. ಯಾರೂ ಅನಕೂಲಸ್ಥರಲ್ಲ, ಬಹಳಷ್ಟು ಶಿಕ್ಷಕ ದಂಪತಿಗಳು ತುಂಬಾ ಇಕ್ಕಟ್ಟಿನಲ್ಲಿದ್ದಾರೆ.ಶಿಕ್ಷಕ ವೃತ್ತಿಯಿಂದ ಮನಸ್ಸಿಗೆ ಸಂತೃಪ್ತಿ ದೊರೆಯುತ್ತದೆ ಇದು ಪುಣ್ಯದ ಕೆಲಸ ಎನ್ನುವ ಕಾರಣಕ್ಕೆ ಈ ಕ್ಷೇತ್ರ ಆಯ್ಕೆ ಮಾಡಿಕೊಂಡೆವು. ಆದರೆ, ವೃತ್ತಿಗೆ ಭದ್ರತೆಯಿಲ್ಲದಿದ್ದರೆ ಇತ್ತೀಚಿನ ದಿನಗಳಲ್ಲಿ ಈ ವೃತ್ತಿಯನ್ನು ನಂಬಿಕೊಂಡು ಬದುಕುವುದು ಕಷ್ಟ ಎನ್ನುವುದು ಈಗ ಅರ್ಥವಾಗುತ್ತಿದೆ. ಆಡಳಿತ ಮಂಡಳಿ ಶಕ್ತಿ ಮೀರಿ ಸಹಾಯ ಮಾಡಬಹುದು. ಪೂರ್ಣ ಪ್ರಮಾಣದಲ್ಲಿ ಸಹಾಯ ಮಾಡಲು ಅವರಿಂದ ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ವಿಜಯಾಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಮಂಜುನಾಥ್ ಮಾತನಾಡಿ, ಶಿಕ್ಷಣ ಸಂಸ್ಥೆ ನಿಭಾಯಿಸುವುದು ತುಂಬಾ ಕಷ್ಟವಾಗುತ್ತಿದೆ. ಶಿಕ್ಷಕರು, ಸಂಸ್ಥೆಯನ್ನು ನಂಬಿಕೊಂಡು ವರ್ಷ ಪೂರ್ತಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈಗ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ನಾವೂ ನೆರವಾಗಬೇಕು. ಆದರೆ, ಏನು ಮಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ನಾವೂ ಎದುರಿಸುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT