ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: ಸುಗಮ ಸಂಚಾರಕ್ಕೆ ಸಂತೆಯೇ ಸಂಚಕಾರ

ಸಂದೀಪ್‌
Published 1 ಜುಲೈ 2024, 7:54 IST
Last Updated 1 ಜುಲೈ 2024, 7:54 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗುವ ಬೆಂಗಳೂರು- ಬಳ್ಳಾರಿ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್‌ ಎದುರು ಪ್ರತಿ ಬುಧವಾರ -ಗುರುವಾರ ಸಂತೆ ನಡೆಯುತ್ತಿದೆ. ಇಲ್ಲಿ ವ್ಯಾಪಾರಸ್ಥರು ರಸ್ತೆಯ ಮಧ್ಯೆಭಾಗದವರೆಗೂ ಅಂಗಡಿಗಳನ್ನು ಇಡುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ರಸ್ತೆಯಲ್ಲಿ ಅಂಗಡಿ ಇಡುತ್ತಿರುವ ವ್ಯಾಪಾರಸ್ಥರನ್ನು ತಡೆಯುವಲ್ಲಿ ಸ್ಥಳೀಯ ಪುರಸಭೆ, ದೇವನಹಳ್ಳಿ ಸಂಚಾರಿ ಪೊಲೀಸ್‌ ವಿಫಲವಾಗಿದೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಮಾರ್ಗವಾಗಿ ಸಾಗುವ ಸವಾರರಿಗೆ ಕಿರಿಕಿರಿ ಅನುಭವಿಸುವಂತಾಗಿದೆ.

ಸಂತೆ ನಡೆಯುವ ಸ್ಥಳಕ್ಕೆ ಹೊಂದಿಕೊಂಡಂತೆ ಬಸ್‌ ನಿಲ್ದಾಣವಿದ್ದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಬಸ್‌ ನಿಲ್ಲಿಸಿದಾಗ ಹಿಂಬದಿಯಲ್ಲಿ ಬರುವ ವಾಹನಗಳು ಮುಂದೆ ಸಾಗದಂತಹ ಸ್ಥಿತಿ ಸೃಷ್ಟಿಯಾಗುತ್ತಿದೆ.

ಪಟ್ಟಣದ ಒಳಗಡೆ ಇರುವ ಬಿಎಂಟಿಸಿ ಬಸ್‌ ಡಿಪೋದ ಮೂಲಕ ಹೊರ ಬರುವ ಬಸ್‌ಗಳು ಇದೇ ಮಾರ್ಗವಾಗಿ ಬರಬೇಕಿದ್ದು, ಆಗಲೂ ಪುಟ್ಟಪ್ಪನ ಗುಡಿ ಬೀದಿಯಿಂದ ಬಿಬಿ ರಸ್ತೆಗೆ ಸಂಪರ್ಕಗೊಳ್ಳುವ ರಸ್ತೆಯಲ್ಲಿ ಗಂಟೆಗಟ್ಟಲೇ ಕಾಯುವಂತಾಗಿದೆ.

ಸಂತೆಯಲ್ಲಿ ಸಿಗುವ ತಾಜಾ ತರಕಾರಿ, ದಿನಸಿಗಳನ್ನು ಕೊಂಡುಕೊಳ್ಳಲು ಬರುವ ಗ್ರಾಹಕರಿಗೆ ಸೂಕ್ತವಾಗಿ ದ್ವಿಚಕ್ರ ವಾಹನ ನಿಲ್ದಾಣಕ್ಕೆ ಸ್ಥಳವಕಾಶವಿಲ್ಲದ ಕಾರಣದಿಂದಾಗಿ, ರಸ್ತೆ ಮಧ್ಯದಲ್ಲಿಯೇ ಬೈಕ್‌ಗಳನ್ನು ನಿಲ್ಲಿಸುತ್ತಿದ್ದು, ರಸ್ತೆ ಭಾಗಶಃ ಮುಚ್ಚಿದಂತಾಗುತ್ತಿದೆ.

ವಾರಾಂತ್ಯದಲ್ಲಿ ಕಾರಿನಲ್ಲಿ ಬಿಬಿ ರಸ್ತೆಯಲ್ಲಿ ಸಾಗಿದರೆ ಸಂಚಾರ ದಟ್ಟಣೆ ಇರುತ್ತದೆ. ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಪೊಲೀಸರು ಗಮನ ಹರಿಸಬೇಕು.
ಅರ್ಜುನ್‌ ಕಾರಹಳ್ಳಿ ಕ್ರಾಸ್‌ ನಿವಾಸಿ ದೇವನಹಳ್ಳಿ
ಸಂತೆಗೆ ಬರುವ ಗ್ರಾಹಕರ ವಾಹನಗಳ ನಿಲುಗಡೆಗೆ ಸೂಕ್ತವಾದ ಸ್ಥಳವಿಲ್ಲ. ಪುರಸಭೆಯವರು ವಾಹನ ನಿಲುಗಡೆಗೆ ಸ್ಥಳ ನಿಗದಿ ಮಾಡಿ ಬಿಬಿ ರಸ್ತೆಯಲ್ಲಿ ಸಂತೆಯಿಂದ ಉಂಟಾಗುವ ಟ್ರಾಫಿಕ್‌ಗೆ ಕಡಿವಾಣ ಹಾಕಬೇಕು
ರಮೇಶಪ್ಪ ದೇವನಹಳ್ಳಿ ಟೌನ್‌ ನಿವಾಸಿ
ಆಡಳಿತಾಧಿಕಾರಿ ಸೂಚನೆಗೆ ಕಿಮ್ಮತ್ತಿಲ್ಲ
ದೇವನಹಳ್ಳಿ ಪುರಸಭೆಯಲ್ಲಿ ಈಚೆಗೆ ನಡೆದ ಸದಸ್ಯರ ಸಮಾಲೋಚನೆ ಸಭೆಯಲ್ಲಿ ರಸ್ತೆಗೆ ಅಡ್ಡಲಾಗಿ ಅಂಗಡಿಗಳನ್ನು ಇಟ್ಟುಕೊಳ್ಳುವವರನ್ನು ತೆರವು ಮಾಡಿ ಇಂದಿರಾ ಕ್ಯಾಂಟಿನ್‌ ಪಕ್ಕದಲ್ಲಿರುವ ಎಪಿಎಂಸಿ ಮಾರಟ ಕಟ್ಟೆಗಳಲ್ಲಿ ಅವಕಾಶ ಕಲ್ಪಿಸಿಕೊಡಲು ಸೂಚಿಸಲಾಗಿತ್ತು. ಸಂಚಾರ ದಟ್ಟಣೆಯಾಗದಂತೆ ತಡೆಯುವಂತೆ ಅಧಿಕಾರಿಗಳು ಸೂಚಿಸಿದ್ದರೂ ಅವರ ಮಾತಿಗೆ ಕಿಮ್ಮತ್ತಿಲ್ಲದಂತಾಗಿದೆ. ಗಮನ ಹರಿಸದ ಸಂಚಾರಿ ಪೊಲೀಸರು ದೇವನಹಳ್ಳಿಯಲ್ಲಿರುವ ಸಂಚಾರಿ ಪೊಲೀಸರು ಬೆಂಗಳೂರು ನಗರ ಪೊಲೀಸ್‌ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ವಿಮಾನ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಮಾತ್ರವೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ದೇವನಹಳ್ಳಿ ಹಳೇ ಪಟ್ಟಣ ಭಾಗದಲ್ಲಿ ಅಷ್ಟಾಗಿ ಗಮನ ಹರಿಸದ ಕಾರಣದಿಂದಾಗಿ ಇಲ್ಲಿ ನಿಯಮ ಉಲ್ಲಂಘಿಸಿದರೂ ಯಾರು ಕೇಳದಂತಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT