ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆ ಮನುಕುಲದ ಜವಾಬ್ದಾರಿ

Last Updated 5 ಜೂನ್ 2020, 15:45 IST
ಅಕ್ಷರ ಗಾತ್ರ

ಆನೇಕಲ್: ಮನುಷ್ಯನ ದುರಾಸೆಯಿಂದ ಅರಣ್ಯ ನಾಶವಾಗುತ್ತಿದೆ. ನಗರೀಕರಣ, ಜಾಗತೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ನಿರಂತರವಾಗಿ ಪರಿಸರವನ್ನು ಹಾಳುಮಾಡುತ್ತಿರುವ ಪರಿಣಾಮ ಭೂಮಿಯ ತಾಪಮಾನ ಗಣನೀಯ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಹಾಗಾಗಿ ಪರಿಸರವನ್ನು ಸಂರಕ್ಷಿಸುವುದು ಮನುಕುಲದ ಜವಾಬ್ದಾರಿ ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಎಪಿಎಸ್‌ ವಿದ್ಯಾಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಅರಣ್ಯನಾಶ ಮತ್ತು ಅರಣ್ಯ ಒತ್ತುವರಿಯಿಂದ ಅನೇಕ ಜೀವ ಸಂಕುಲಗಳು ನಶಿಸಿಹೋಗುತ್ತಿವೆ. ಭೂಕಂಪ, ಪ್ರಳಯ ಸೇರಿದಂತೆ ವಿವಿಧ ರೂಪಗಳಲ್ಲಿ ಪ್ರಕೃತಿ ಮನುಷ್ಯನಿಗೆ ಎಚ್ಚರಿಕೆ ನೀಡುತ್ತಿದ್ದರೂ ಮನುಷ್ಯ ಅದನ್ನು ಲೆಕ್ಕಿಸದೆ ಪರಿಸರ ನಾಶದಲ್ಲಿ ತೊಡಗಿರುವುದು ಆತಂಕಕಾರಿಯಾಗಿದೆ. ನಾವು ಜೀವನ ನಡೆಸಲು ಶುದ್ಧ ಗಾಳಿ, ನೀರು, ಉತ್ತಮ ಪರಿಸರ ಅಗತ್ಯವಿದೆ. ಹಾಗಾಗಿ ಪರಿಸರ ಪ್ರೇಮವನ್ನು ಜೂನ್‌ಗೆ ಸೀಮಿತಗೊಳಿಸದೇ ಪ್ರತಿದಿನ ಗಿಡ ಮರಗಳನ್ನು ಪೋಷಿಸುವ ಮೂಲಕ ಪರಿಸರದ ಪ್ರಾಮುಖ್ಯತೆಯನ್ನು ತಿಳಿಸಬೇಕು’ ಎಂದರು.

ಎಪಿಎಸ್‌ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಿ.ಮುನಿರಾಜು ಮಾತನಾಡಿ, ‘ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೊಡುಗೆ ನೀಡುವ ಮೂಲಕ ಇರುವ ಒಂದು ಭೂಮಿಯನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಪರಿಸರವನ್ನು ರಕ್ಷಿಸುವ ಜವಾಬ್ದಾರಿಯಿದ್ದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಮಾಡುತ್ತಿದ್ದಾನೆ. ಇದರ ಪ್ರತಿಫಲವನ್ನು ಮನುಷ್ಯನೇ ಅನುಭವಿಸುತ್ತಾನೆ. ಕೊರೊನಾದಂತ ಮಹಾಮಾರಿ ವಿಶ್ವಕ್ಕೆ ಮಾರಕವಾಗಿರುವ ಇಂದಿನ ದಿನಗಳಲ್ಲಿ ಮನುಷ್ಯ ಪರಿಸರದ ಮಹತ್ವವನ್ನು ಅರಿತು ತನ್ನ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ, ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಯ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಶೇಖರ್, ಅಜ್ಜಪ್ಪ, ವಿಧಾತ್‌, ಎಪಿಎಸ್‌ ನಿರ್ದೇಶಕ ದಿಲೀಪ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT