ಗುರುವಾರ , ಅಕ್ಟೋಬರ್ 1, 2020
25 °C
ಕೋಡಿಹಳ್ಳಿಯಲ್ಲಿ ಮಾಹಿತಿ ನೀಡದೆ ರಸ್ತೆ ಕಾಮಗಾರಿ ಆರೋಪ

ಅನಧಿಕೃತವಾಗಿ ರಸ್ತೆ ಕಾಮಗಾರಿ ಶಿಷ್ಟಾಚಾರ ಉಲ್ಲಂಘನೆ: ಶಾಸಕ ಶರತ್ ಬಚ್ಚೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ರಸ್ತೆ ಕಾಮಗಾರಿ ಮಾಡುತ್ತಿದ್ದು ಅದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.

ಕೋಡಿಹಳ್ಳಿಯಲ್ಲಿ ಮಾತನಾಡಿದ ಅವರು, ‘ಊರಿನಲ್ಲಿ ಇತ್ತೀಚೆಗಷ್ಟೇ ನಿರ್ಮಾಣ ಮಾಡಿದ್ದ ಹಾಗೂ ಉತ್ತಮವಾಗಿದ್ದ ರಸ್ತೆಯನ್ನು ಅನಾವಶ್ಯಕವಾಗಿ ಕಿತ್ತು ಅದಕ್ಕೆ ಮತ್ತೆ ಕಾಂಕ್ರೀಟ್‌ ಹಾಕುವ ಕೆಲಸಕ್ಕೆ ಕೆಲವರು ಮುಂದಾಗಿದ್ದಾರೆ. ಇದು ಕಾನೂನು ಬಾಹಿರ ಕೆಲಸ. ಈ ಕಾಮಗಾರಿಗೆ ಯಾವುದೇ ಇಲಾಖೆಯಿಂದ ಅನುದಾನ ಬಂದಿಲ್ಲ. ಯಾವುದೇ ಕೆಲಸದ ಆದೇಶವಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗೂ ಈ ವಿಷಯದ ಬಗ್ಗೆ ಮಾಹಿತಿಯಿಲ್ಲ. ಅದಕ್ಕೂ ಮಿಗಿಲಾಗಿ ಸ್ಥಳೀಯ ಶಾಸಕನಾಗಿ ತಮ್ಮ ಗಮನಕ್ಕೂ ಇದು ಬಂದಿಲ್ಲ’ ಎಂದರು.

‘ಈ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರ ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಾರಾದರೂ ಅದರ ಬಗ್ಗೆ ಯಾವುದೇ ದಾಖಲೆಯಿಲ್ಲ. ಹಾಗೂ ಆ ಆದೇಶದಲ್ಲಿ ಇಂತಹ ರಸ್ತೆಯ ಕೆಲಸವೆಂದು ಉಲ್ಲೇಖ ಇಲ್ಲವಾದ್ದರಿಂದ ಇದು ಅನಧಿಕೃತ’ ಎಂದರು.

‘ಆದರೂ ಕೆಲವು ಜನರ ಹಿತಾಸಕ್ತಿಗೆ ಪೊಲೀಸ್ ಇಲಾಖೆ ಬಲಿಯಾಗಿದೆ. ಪೊಲೀಸರು ಗುತ್ತಿಗೆದಾರನ ಬಂಟರಂತೆ ಕೆಲಸ ಮಾಡುತ್ತಿದ್ದು ಖುದ್ದಾಗಿ ಸರ್ಕಲ್ ಇನ್‌ಸ್ಪೆಕ್ಟರ್‌ ಅವರೇ ನಿಂತು ಅವರಿಗೆ ಸಹಕಾರ ನೀಡುತ್ತಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯ’ ಎಂದರು.

‘ಮುಂದಿನ ದಿನಗಳಲ್ಲಿ ಬರುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ರಾಜಕೀಯ ಮಾಡುತ್ತಿದ್ದು ಇದರ ಬಗ್ಗೆ ಜಿಲ್ಲಾಧಿಕಾರಿ ಬಳಿ ಮಾತನಾಡುವುದಾಗಿ ತಿಳಿಸಿದರು. ಪೊಲೀಸ್ ಇಲಾಖೆಗೆ ಯಾರೂ ಲಿಖಿತವಾಗಿ ದೂರು ನೀಡದಿದ್ದರೂ ಅವರೇ ಖುದ್ದಾಗಿ ಬಂದು ಇಂತಹ ಕೆಲಸಕ್ಕೆ ಭದ್ರತೆ ನೀಡುತ್ತಿದ್ದಾರೆ’ ಎಂದರು.

ಸ್ಥಳದಲ್ಲಿ ಹಾಜರಿದ್ದ ಡಿವೈಎಸ್‌ಪಿ ನಿಂಗಪ್ಪ ಸಕ್ರಿ ಮಾತನಾಡಿ, ‘ನಾವು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಊರಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಬಂದಿದ್ದು ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು’ ಎಂದರು.

ಸ್ಥಳೀಯ ಮುಖಂಡ ಜನಾರ್ದನ್ ಮಾತನಾಡಿ, ಈ ಕೆಲಸವು ಕಾನೂನು ಬದ್ಧವಾಗಿದ್ದು ಇದನ್ನು ಊರಿನ ಅಭಿವೃದ್ಧಿಗಾಗಿ ಮಾಡುತ್ತಿದ್ದೇವೆ. ಯಾವುದೇ ಇಲಾಖೆಯ ಅನುದಾನವಿಲ್ಲದಿದ್ದರೆ ತಾವೇ ವೈಯಕ್ತಿಕವಾಗಿ ಕಾಮಗಾರಿಯನ್ನು ಪೂರ್ತಿ ಮಾಡುವುದಾಗಿ ತಿಳಿಸಿದರು.

ಊರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತಾದರೂ ಪೊಲೀಸರ ಮಧ್ಯಪ್ರವೇಶದಿಂದ ಘರ್ಷಣೆಗೆ ಅವಕಾಶವಾಗಲಿಲ್ಲ.

ಮುಖಂಡರಾದ ಬೈರೇಗೌಡ, ಕೋಡಿಹಳ್ಳಿ ಸುರೇಶ್, ಜಿಲ್ಲಾ ಪಂಚಾ ಯಿತಿ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಸ್.ಎಂ. ಮಂಜುನಾಥ್ ಭಾಗವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.