ಶುಕ್ರವಾರ, ನವೆಂಬರ್ 15, 2019
20 °C

‘ಆಸ್ಪತ್ರೆಗೆ ಸಮರ್ಪಕ ವಿದ್ಯುತ್ ಒದಗಿಸಿ’

Published:
Updated:
Prajavani

ದೇವನಹಳ್ಳಿ: ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸಮರ್ಪಕ ವಿದ್ಯುತ್ ಕೊರತೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು ಸಕಾಲದಲ್ಲಿ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಬೆಸ್ಕಾಂ ಅಧಿಕಾರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ಕಾರ್ಯಕರ್ತರು ಮನವಿ ನೀಡಿದರು.

ವೇದಿಕೆ ತಾಲ್ಲೂಕು ಘಟಕ ಉಪಾಧ್ಯಕ್ಷ ಗೋಕರೆ ಸತೀಶ್ ಮಾತನಾಡಿ, ‘ಈಚೆಗೆ ಹವಾಮಾನ ವೈಪರೀತ್ಯದಿಂದ ಸಾಮಾನ್ಯ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ, ಮಲ, ಮೂತ್ರ, ರಕ್ತ ಪರೀಕ್ಷೆ, ಕಫ ಪರೀಕ್ಷೆ ನಡೆಸುವ ತಜ್ಞರಿದ್ದಾರೆ. ಇ.ಸಿ.ಜಿ ಸೇರಿದಂತೆ ಹೃದಯ ಸಂಬಂಧಿ ರೋಗಗಳು ಮತ್ತು ಪ್ರಸೂತಿ ಕೇಂದ್ರ ಸೇರಿದಂತೆ ವಿವಿಧ ಘಟಕಗಳಲ್ಲಿ ಸಕಾಲದಲ್ಲಿ ವಿದ್ಯುತ್ ಸರಬರಾಜು ಆಗುತ್ತಿಲ್ಲ’ ಎಂದರು.

‘ವಿದ್ಯುತ್ ಸಮಸ್ಯೆಯಿಂದ ಉಚಿತ ಮತ್ತು ರಿಯಾಯಿತಿಯಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಪಡೆದುಕೊಳ್ಳಬೇಕಾದ ಬಡರೋಗಿಗಳು ದುಪ್ಪಟ್ಟು ಹಣ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ’ ಎಂದು ಹೇಳಿದರು.

ಬೆಳಿಗ್ಗೆ 9 ಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಆರಂಭಗೊಳ್ಳುತ್ತದೆ, ವಿದ್ಯುತ್ ಅವಶ್ಯಕತೆ ಇರಬೇಕಾದ ಪ್ರಮುಖ ಸಮಯ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿಯೇ ವಿದ್ಯುತ್ ಇಲ್ಲದಿರುವುದರಿಂದ ವಿವಿಧ ತಜ್ಞ ರೋಗಗಳ ವೈದ್ಯರು ಪರದಾಡುವಂತಾಗಿದೆ. ಬೆಸ್ಕಾಂ ಇಲಾಖೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಳವಡಿಸಿರುವ ಗ್ರಾಮೀಣ ವಿದ್ಯುತ್ ಮಾರ್ಗವನ್ನು ಬದಲಾಯಿಸಿ ನಗರದ ವಿದ್ಯುತ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿ ಪ್ರತ್ಯೇಕ ವಿದ್ಯುತ್ ಪರಿವರ್ತಕ ಅಳವಡಿಸಿದರೆ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆಯಾಗಲಿದೆ’ ಎಂದರು.

‘ಬೆಸ್ಕಾಂ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ತ್ವರಿತವಾಗಿ ಸೂಕ್ತಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬೆಸ್ಕಾಂ ಸಹಾಯಕ ಎಂಜಿನಿಯರ್ ಷಡಕ್ಷರಯ್ಯ ಮಾತನಾಡಿ, ಇದೇ ಮೊದಲ ಬಾರಿಗೆ ದೂರು ಬಂದಿದೆ, ಸಾರ್ವಜನಿಕರ ಸಮಸ್ಯೆ ಕುರಿತು ಬೆಸ್ಕಾಂ ಇಲಾಖೆ ವತಿಯಿಂದ ಪ್ರತಿ ತಿಂಗಳು ಸಾರ್ವಜನಿಕರ ಮತ್ತು ಗ್ರಾಹಕರ ಸಭೆ ನಡೆಸಲಾಗುತ್ತಿದೆ, ಯಾವುದೇ ಸಮಸ್ಯೆ ಇದ್ದರೆ ಗಮನಕ್ಕೆ ತಂದರೆ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ಹೇಳಿದರು.

ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)