ಗುರುವಾರ , ಅಕ್ಟೋಬರ್ 17, 2019
26 °C

ನೆರೆಸಂತ್ರಸ್ತರಿಗೆ ಪರಿಹಾರ ವಿಳಂಬ ಸಲ್ಲದು

Published:
Updated:
Prajavani

ದೊಡ್ಡಬಳ್ಳಾಪುರ: ಉತ್ತರ ಕರ್ನಾಟಕದಲ್ಲಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ನೆರೆ ಸಂತ್ರಸ್ತರ ಪರಿಹಾರ ಸಮಿತಿ ಹಾಗೂ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಸಂಸದರಿಗೆ ಅರಿಶಿಣ, ಕುಂಕುಮ ಬಳೆ ಮತ್ತು ಸೀರೆ ಕಳುಹಿಸುವ ಮೂಲಕ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ‘ರಾಜ್ಯದ 28 ಸಂಸದರು ಹಾಗೂ ಮೂರು ಜನ ಕೇಂದ್ರ ಸಚಿವರಿದ್ದಾಗಿದ್ದರೂ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸರ್ಕಾರ ನೇರವಿಗೆ ಬರುವಲ್ಲಿ ಕ್ರಮ ಕೈಗೊಳ್ಳದಿರುವುದು ಖಂಡನೀಯ. ನೆರೆಪೀಡಿತ ಜನರ ಸಂಕಷ್ಟಕ್ಕೆ ನಾಡಿನ ಜನತೆ ನೆರವಾದರು ಸರ್ಕಾರಗಳು ಪರಿಹಾರ ನೀಡದಿರುವುದು ವಿಷಾದನೀಯ ಎಂದರು.

ಕನ್ನಡಪಕ್ಷದ ಸಂಜೀವ್‌ನಾಯಕ್ ಮಾತನಾಡಿ, ‘ರೈತಪರ ಹೋರಾಟಗಾರ ನಾನು ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರದಿಂದ ನೆರೆಪರಿಹಾರ ದೊರಕಿಸದೆ, ಚುನಾವಣೆ ಹಿನ್ನೆಲೆ ರಾಜಕೀಯ ಲಾಭಕ್ಕಾಗಿ ನೆರೆಪೀಡಿತರ ಸಾಂತ್ವನ ಹೇಳಲು ತೆರಳಿರುವುದು ಸರಿಯಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಕ್ಷಣ ಪರಿಹಾರ ನೀಡಿ, ಇಲ್ಲವೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ ಮಾತನಾಡಿ, ‘ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಶಿವರಾಜ್‍ಕುಮಾರ್ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ರಮೇಶ್, ವಿಕರವೇ ತಾಲ್ಲೂಕು ಅಧ್ಯಕ್ಷ ಎ.ನಂಜಪ್ಪ, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಕಾಡನೂರು ಮೂರ್ತಿ, ಕನ್ನಡ ಪಕ್ಷದ ಡಿ.ಪಿ.ಆಂಜನೇಯ ಮಾತನಾಡಿದರು.

ಪ್ರತಿಭಟನೆಯಲ್ಲಿ ನೆರೆ ಸಂತ್ರಸ್ತ ಪರಿಹಾರ ಸಮಿತಿಯ ಮುಖಂಡರಾದ ಡಿ.ವೆಂಕಟೇಶ್, ಎಸ್.ಮಂಜುನಾಥ್, ವಸಂತ್‌ಕುಮಾರ್‌, ಮುತ್ತುರಾಜ್, ಧನಂಜಯ, ಮಂಜುನಾಥಸ್ವಾಮಿ, ಪರಮೇಶ್, ವಿಕರವೇ ಪದಾಧಿಕಾರಿಗಳಾದ ಗಂಗಾಧರ, ಸತೀಶ್, ಮಂಜುನಾಥ್, ಜೀವನ್, ಮನೋಹರ್, ಲಕ್ಷ್ಮಣ್, ಶಿವಶಂಕರ್, ದೇವ ಇದ್ದರು.

Post Comments (+)