ಶನಿವಾರ, ಜುಲೈ 31, 2021
21 °C
ಹೀಲಲಿಗೆ ರೈಲ್ವೆ ನಿಲ್ದಾಣಕ್ಕೆ ಸಿ.ಎಂ ಬಿ.ಎಸ್.‌ ಯಡಿಯೂರಪ್ಪ ಭೇಟಿ

ರೈಲ್ವೆ ಡಬ್ಲಿಂಗ್ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ಹೀಲಲಿಗೆ ರೈಲ್ವೆ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ ಅಧಿಕಾರಿಗಳೊಂದಿಗೆ ಗುರುವಾರ ಆಗಮಿಸಿ ದ್ವಿಪಥದ ರೈಲ್ವೆ ಹಳಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

ಬೈಯಪ್ಪನಹಳ್ಳಿ- ರಾಜನಕುಂಟೆ- ಯಶವಂತಪುರ- ಹೊಸೂರು ರಸ್ತೆ ಸಂಪರ್ಕಿಸುವ ರೈಲ್ವೆ ಮಾರ್ಗಗಳ ದ್ವಿಪಥದ ಹಳಿ (ರೈಲ್ವೆ ಡಬ್ಲಿಂಗ್‌) ಕಾಮಗಾರಿ ನಡೆಯುತ್ತಿದ್ದು, 2023ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಸಬ್‌ ಅರ್ಬನ್‌ ರೈಲ್ವೆ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ. 148 ಕಿ.ಮೀ ಯೋಜನೆ ಇದಾಗಿದ್ದು, ಸುಮಾರು ₹ 15,767 ಕೋಟಿ ಮೊತ್ತದ ಬೃಹತ್‌ ಯೋಜನೆಯಾಗಿದೆ. ಮೂರು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಆನೇಕಲ್‌ ತಾಲ್ಲೂಕಿನ ಹೀಲಲಿಗೆವರೆಗೆ ರೈಲಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಅವರು ದ್ವಿಪಥ ರೈಲು ಹಳಿಯ ಕಾಮಗಾರಿಯನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಯೋಜನೆ ಬಗ್ಗೆ ಮಾಹಿತಿ ಪಡೆದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಜೀವರಾಜ್‌, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌, ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಹಾಜರಿದ್ದರು.

ರೈಲ್ವೆ ಡಬ್ಲಿಂಗ್‌: 70 ಕಿ.ಮೀ ಉದ್ದದ ರೈಲ್ವೆ ಡಬ್ಲಿಂಗ್‌ ಹಳಿಯಿಂದಾಗಿ ರೈಲುಗಳ ಸಂಚಾರ ಹೆಚ್ಚಾಗಲು ಸಾಧ್ಯವಾಗಲಿದೆ. ಬೆಂಗಳೂರಿನಿಂದ ಹೊಸೂರುವರೆಗೂ ದ್ವಿಪಥ ಹಳಿ ಕಾರ್ಯ ಪ್ರಗತಿಯಲ್ಲಿದೆ.

ಸಬ್‌ ಅರ್ಬನ್‌ ರೈಲ್ವೆ ಯೋಜನೆಯು 148 ಕಿ.ಮೀ ಉದ್ದದ ಯೋಜನೆಯಾಗಿದೆ. 57 ಹೊಸ ನಿಲ್ದಾಣಗಳು, ನಾಲ್ಕು ಕಾರಿಡಾರ್‌ಗಳು ಇರಲಿವೆ. 10 ಲಕ್ಷಕ್ಕಿಂತ ಹೆಚ್ಚಿನ ಜನರು ಪ್ರತಿನಿತ್ಯ ಪ್ರಯಾಣಿಸಲು ಅನುಕೂಲವಾಗುವಂತೆ ಪರಿಸರಸ್ನೇಹಿ ಕಾಮಗಾರಿಯಾಗಿದೆ.

ಸಬ್‌ ಅರ್ಬಲ್‌ ರೈಲ್ವೆ ಯೋಜನೆಯಿಂದಾಗಿ ಆನೇಕಲ್‌ ತಾಲ್ಲೂಕಿನ ಬೊಮ್ಮಸಂದ್ರ, ವೀರಸಂದ್ರ, ಜಿಗಣಿ, ಅತ್ತಿಬೆಲೆ ಕೈಗಾರಿಕೆಗಳಿಗೆ ಸಂಪರ್ಕ ಸುಲಭವಾಗುತ್ತದೆ. ಯೋಜನೆಯ ನಾಲ್ಕನೇ ಕಾರಿಡಾರ್‌ 46.24 ಕಿ.ಮೀ ದೂರವಿದ್ದು, ಹೀಲಲಿಗೆ-ರಾಜನಕುಂಟೆ ಮಾರ್ಗವಾಗಿದೆ. ಹೀಲಲಿಗೆ- ಬೊಮ್ಮಸಂದ್ರ- ಸಿಂಗೇನಅಗ್ರಹಾರ- ಹುಸ್ಕೂರು- ಅಂಬೇಡ್ಕರ್‌ ನಗರ- ಕಾರ್ಮಾಲರಾಮ್‌- ಬೆಳ್ಳಂಡೂರು ರಸ್ತೆ- ಮಾರತಹಳ್ಳಿ- ಕಗ್ಗದಾಸನಪುರ- ಬೈಯಪ್ಪನಹಳ್ಳಿ- ಚನ್ನಸಂದ್ರ- ಹೊರಮಾವು- ಹೆಣ್ಣೂರು- ಥಣಿಸಂದ್ರ- ಹೆಗ್ಗಡೆನಗರ- ಜಕ್ಕೂರು-ಯಲಹಂಕ- ಮುದ್ದೇನಹಳ್ಳಿ- ರಾಜನಕುಂಟೆ ಮಾರ್ಗವಾಗಿದೆ.

ಆನೇಕಲ್‌ ತಾಲ್ಲೂಕಿನಲ್ಲಿ ಐದು ರೈಲ್ವೆ ನಿಲ್ದಾಣಗಳು ಸಬ್‌ಅರ್ಬನ್‌ ಯೋಜನೆಯಡಿ ಬರಲಿವೆ. ಹೀಲಲಿಗೆ, ಬೊಮ್ಮಸಂದ್ರ, ಸೀಂಗೇನಅಗ್ರಹಾರ, ಹುಸ್ಕೂರು, ಅಂಬೇಡ್ಕರ್‌ ನಗರ ಸೇರಿದಂತೆ ಐದು ನಿಲ್ದಾಣಗಳು ತಾಲ್ಲೂಕಿನ ವ್ಯಾಪ್ತಿಗೆ ಬರಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.