ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೀಸಲಾತಿ ನಮ್ಮ ಹಕ್ಕು'

ಕುರುಬ ಸಮುದಾಯದ ಪ್ರತಿಪಾದನೆ
Last Updated 4 ಫೆಬ್ರುವರಿ 2021, 8:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಫೆ. 7ರಂದು ಕುರುಬ ಎಸ್.ಟಿ ಹೋರಾಟ ಸಮಿತಿಯಿಂದ ಬೆಂಗಳುರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ತಾಲ್ಲೂಕಿನಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಕುರುಬರ ಸಂಘದ ಮುಖಂಡ ಎಂ. ಮಲ್ಲೇಶ್ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕುರುಬ ಸಮುದಾಯ ಬುಡಕಟ್ಟು ಜನಾಂಗದಿಂದ ಗುರುತಿಸಿಕೊಂಡಿದೆ. ಈ ಹಿಂದೆ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಇತ್ತು' ಎಂದರು.

‘ಮೂರು ಜಿಲ್ಲೆಗಳಿಂದ ಕುರುಬ ಸಮುದಾಯವನ್ನು ಎಸ್.ಟಿಗೆ ಸೇರಿಸುವ ಪ್ರಸ್ತಾಪ ಕೇಂದ್ರಕ್ಕೆ ಹೋಗಿದೆ. ಆದರೆ, ಕೊಡಗಿನ ಪ್ರಸ್ತಾಪ ವಾಪಸ್ ಬಂದಿದೆ. ಈ ಎರಡೂ ಪ್ರಸ್ತಾವಗಳೊಂದಿಗೆ ಇಡೀ ಕರ್ನಾಟಕದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲು ಕುರುಬ ಎಸ್.ಟಿ ಹೋರಾಟ ಸಮಿತಿ ರಚನೆ ಮಾಡಲಾಗಿದೆ' ಎಂದು ಅವರು ತಿಳಿಸಿದರು.

‘ಎಸ್.ಟಿ ಸಮುದಾಯವು ಶೇಕಡ 3ರಿಂದ ಶೇಕಡ 7.5ಕ್ಕೆ ಮೀಸಲಾತಿ ಬೇಡಿಕೆ ಇಟ್ಟಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣಕ್ಕೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ನಮಗಿರುವ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಕುರುಬ ಸಮುದಾಯವನ್ನು ಎಸ್.ಟಿಗೆ ಸೇರಿಸಲು ಒತ್ತಾಯಿಸಿ ಜ. 15ರಿಂದ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಪೂರ್ಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ನೇತೃತ್ವದಲ್ಲಿ ಸಮಾವೇಶಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

ತಾಲ್ಲೂಕು ಕುರುಬರ ಸಂಘದ ಗೌರವಾಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಫೆ. 7ರಂದು ಬೆಂಗಳೂರಿನ ಮಾದಾವರದ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಸಮಾವೇಶಕ್ಕೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅನುಕೂಲವಿದ್ದವರು ತಮ್ಮ ಸ್ವಂತ ವಾಹನಗಳಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ತಾಲ್ಲೂಕು ಕುರುಬರ ಸಂಘದ ಖಜಾಂಚಿ ಅರುಣ್‌ಕುಮಾರ್, ಮುಖಂಡರಾದ ಸತೀಶ್, ಚಂದ್ರಶೇಖರ್, ಮುನಿಕೃಷ್ಣಪ್ಪ, ಚೌಡರಾಜ್, ಮುರಳಿ, ಗೋಪಿ, ಮಾರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT