ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ

ಕೆಲಸ ವಿಳಂಬಕ್ಕೆ ಅಧಿಕಾರಶಾಹಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ: ಎಸಿಬಿ ಡಿವೈಎಸ್‌ಪಿ ಎಚ್ಚರಿಕೆ
Last Updated 18 ಫೆಬ್ರುವರಿ 2021, 6:07 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ವಿನಾಕಾರಣ ವಿಳಂಬ ಮಾಡುವುದು, ಸಕಾಲದಲ್ಲಿ ಬರುವ ಅರ್ಜಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇರುವುದು ಸಾಬೀತಾದರೆ ಶಿಕ್ಷೆ ಆಗುವುದು ಖಚಿತ ಎಂದು ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿವೈಎಸ್‌ಪಿ ಗೋಪಾಲ್‌ ಡಿ. ಜೋಗಿನ ಹೇಳಿದರು.

ಅವರು ಬುಧವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಸಿಬಿಯಿಂದ ನಡೆದ ಸಾರ್ವಜನಿಕರ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಮಾತನಾಡಿದರು.

ಲಾಕ್‌ಡೌನ್‌ ನಂತರ ಮತ್ತೆ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ಎಸಿಬಿಯಿಂದ ಪ್ರಾರಂಭಿಸಲಾಗಿದೆ. ಆದರೆ, ಈ ಬಗ್ಗೆ ಸೂಕ್ತ ಪ್ರಚಾರದ ಕೊರತೆಯಿಂದಾಗಿ ಸಭೆಗಳಿಗೆ ಸಾರ್ವಜನಿಕರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಸಭೆಯಲ್ಲಿ ತಾಲ್ಲೂಕುಮಟ್ಟದ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ಸಾರ್ವಜನಿಕರಿಂದ ಬರುವ ದೂರುಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಎಸಿಬಿ ಹಾಗೂ ಲೋಕಾಯುಕ್ತದಲ್ಲಿ ಒಮ್ಮೆ ದೂರು ದಾಖಲಾದರೆ ಅಧಿಕಾರಿಗಳು ತನಿಖೆಯನ್ನು ಎದುರಿಸಲೇ ಬೇಕು ಎಂದು ತಿಳಿಸಿದರು.

ಸರ್ಕಾರಿ ಅನುದಾನ ಬಳಕೆಯಲ್ಲಿನ ತಾರತಮ್ಯ, ಭ್ರಷ್ಟಾಚಾರ, ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಮುಂತಾದ ಪ್ರಕರಣಗಳನ್ನು ಎಸಿಬಿಯಲ್ಲಿ ದಾಖಲಿಸಲು ಅವಕಾಶ ಇದೆ. ಜಿಲ್ಲೆಯಲ್ಲಿ ದಾಖಲಾಗಿರುವ 250 ಪ್ರಕರಣಗಳಲ್ಲಿ 50 ಪ್ರಕರಣಗಳು ಮಾತ್ರ ನಮ್ಮ ತನಿಖಾ ವ್ಯಾಪ್ತಿಗೆ ಬರುತ್ತಿವೆ. ಉಳಿದ ಬಹುತೇಕ ಪ್ರಕರಣಗಳು ನ್ಯಾಯಾಲಯ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಮಾಹಿತಿ ನೀಡಿದರು.

ಯಾವುದೇ ಪ್ರಕರಣ ಈಗಾಗಲೇ ಯಾವುದೇ ಹಂತದ ನ್ಯಾಯಾಲಯದ ವಿಚಾರಣೆಯಲ್ಲಿ ಇದ್ದ ಸಂದರ್ಭದಲ್ಲಿ ಎಸಿಬಿ ತನಿಖೆ ನಡೆಸುವ ಅಥವಾ ಕ್ರಮ ಕೈಗೊಳ್ಳಲು ಅವಕಾಶ ಇರುವುದಿಲ್ಲ. ಆದರೆ, ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲದೆ ಎಸಿಬಿಯಲ್ಲಿ ದೂರು ದಾಖಲಿಸುತ್ತಿದ್ದಾರೆ ಎಂದರು.

ಸಭೆಯಲ್ಲಿ ಕೋಳೂರು ನಿವಾಸಿ ಸಂಪಂಗಿರಾಮಯ್ಯ, ತಾಲ್ಲೂಕು ಕಚೇರಿಯಿಂದ ಹಳೆಯ ಪಹಣಿ ಸೇರಿದಂತೆ ಯಾವುದೇ ದಾಖಲೆಗಳು ಪಡೆಯಬೇಕಿದ್ದರು ರೈತರು ಅಲೆದಾಡುವಂತಾಗಿದೆ. ಹಣ ನೀಡಿದರೆ ತಕ್ಷಣ ದೊರೆಯುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸಿಬಿ ಡಿವೈಎಸ್‌ಪಿ ಅವರಿಗೆ ಲಿಖಿತ ದೂರು ನೀಡಿದರು.

ಹಣಬೆ ಗ್ರಾಮದಲ್ಲಿ ರಸ್ತೆ ಅಡ್ಡಲಾಗಿ ನಿರ್ಮಿಸಲಾಗಿರುವ ಮನೆಗೆ ಪಂಚಾಯಿತಿಯಿಂದ ಅನುದಾನ ನೀಡಲಾಗಿದೆ. ಇದರಿಂದ ಸಾರ್ವಜನಿಕರು ನಡೆದಾಡಲು ಕಷ್ಟವಾಗಿದೆ. ಈ ಕುರಿತು ಪಂಚಾಯಿತಿಗೆ ದೂರು ನೀಡಿದ್ದರು ಕ್ರಮಕೈಗೊಳ್ಳದೆ ಇರುವ ಬಗ್ಗೆ ಮುನೇಗೌಡ ಅವರು ದೂರು ನೀಡಿದರು.

ಸಭೆಯಲ್ಲಿ ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್‌, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ, ಎಸಿಬಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕುಮಾರಸ್ವಾಮಿ, ಕಾನ್‌ಸ್ಟೆಬಲ್‌ ಧನಂಜಯ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT