ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ‌ ಅಭಿವೃದ್ಧಿಗೆ ಸಂಸದ ಚಾಲನೆ

ಕ್ಷೇತ್ರ ವ್ಯಾಪ್ತಿಯಲ್ಲಿ 310 ಕಿಲೋಮೀಟರ್ ಉದ್ದದ ಮಾರ್ಗ
Last Updated 19 ಜೂನ್ 2020, 7:05 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2020–21ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ 310 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದರು.

ಇಲ್ಲಿನ ನಗರದ ಪೊಲನಹಳ್ಳಿಯಿಂದ ಸಾಗುವ ರಸ್ತೆಗೆ ಭೂಮಿಪೂಜೆ ನೆರವೇರಿಸಿದ ನಂತರ ಪ್ರವಾಸಿ ಮಂದಿರದಲ್ಲಿ ಮಾಹಿತಿ ನೀಡಿದ ಅವರು, ‘ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ಖಾತೆಗಳನ್ನು ನಿರ್ವಹಿಸುತ್ತಿರುವ ನಿತಿನ್ ಗಡ್ಕರಿ ಅವರು ಕಾಮಗಾರಿಗೆ ವೇಗ ಹೆಚ್ಚಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ₹ 205 ಕೋಟಿ ವೆಚ್ಚದಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳು ಅಭಿವದ್ಧಿಯಾಗಲಿವೆ’ ಎಂದು ಹೇಳಿದರು.

2012 ರಲ್ಲಿ ರಾಷ್ಟ್ರೀಯ ಹೆದ್ದಾರಿ– 207ರ ರಸ್ತೆ ವಿಸ್ತರಣೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಕಾಮಗಾರಿ ನಡೆಯದೆ ಸ್ಥಗಿತಗೊಂಡಿರುವುದು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹೊರತು ರಾಜಕಾರಣಿಗಳಿಂದಲ್ಲ. ವಾರ್ಷಿಕವಾಗಿ ಯಾವ ರಸ್ತೆಗಳು ಅಭಿವೃದ್ಧಿಯಾಗಬೇಕು? ಎಷ್ಟು ಕಿಲೋಮೀಟರ್‌ ಎಂಬುದನ್ನು ಅಧಿಕಾರಿಗಳು ಮಾಹಿತಿ ಪಡೆದು ಜನಪ್ರತಿನಿಧಿಗಳಿಗೆ
ನೀಡಬೇಕು. ಇಲ್ಲದಿದ್ದರೆ ಸ್ಥಳೀಯ ಮುಖಂಡರು ನಮ್ಮ ಗಮನಕ್ಕೆ ತಂದರೂ ಸಾಕು. ಪ್ರಸ್ತುತ ಅಭಿವೃದ್ಧಿಯಾಗುತ್ತಿರುವ ರಸ್ತೆಗಳು ತಪ್ಪಿಸಿಕೊಂಡಿರುವ ರಸ್ತೆ (ಮಿಸ್ಸಿಂಗ್ ರೋಡ್ಸ್)ಯಡಿಕಾಮಗಾರಿ ನಡೆಸಲಾಗುತ್ತಿದೆ’ ಎಂದರು.

‘ಕೇಂದ್ರ ಸರ್ಕಾರ ವಾರ್ಷಿಕ ₹ 5 ಕೋಟಿ ಸಂಸದರ ಅನುದಾನದಲ್ಲಿ ಶೇ 50ರಷ್ಟು ನೀಡುವುದಾಗಿ ಹೇಳಿದೆ. ಸಂಸದರ ಕ್ಷೇತ್ರದಲ್ಲಿ ಶಾಲಾ ತಡೆಗೊಡೆ, ಸಮುದಾಯ ಭವನ, ಹೈಮಾಸ್ಟ್‌ ದ್ವೀಪ, ಅಂಗನವಾಡಿ ಕಟ್ಟಡ ದುರಸ್ತಿ, ಸಣ್ಣಪುಟ್ಟ ಕಾಮಗಾರಿ ಹೊರತುಪಡಿಸಿದರೆ ದೊಡ್ಡಮಟ್ಟದಲ್ಲಿ ಅನುದಾನ ಇಲ್ಲ’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಸತತ 30 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಏಕೈಕ ಉದ್ದೇಶದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿರವರೊಂದಿಗೆ ಸಂಪರ್ಕ ಸಾಧಿಸಿ ಕೇಂದ್ರ ಸರ್ಕರದ ಶೇ 60 ಹಾಗೂ ರಾಜ್ಯ ಸರ್ಕಾರದ ಶೇ 40 ರಷ್ಟು ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು ಮೂರು ದಶಕಗಳ ಸ್ಥಳೀಯರ ಬೇಡಿಕೆ ಈಡೇರಿದಂತಾಗಿದೆ’ ಎಂದು ಹೇಳಿದರು.

ಜೆಡಿ‌ಎಸ್ ಅಧ್ಯಕ್ಷ ಬಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಕೆ.ಪಿ.ಸಿ.ಸಿ ಸದಸ್ಯ ಚಿನ್ನಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಬಿಜೆಪಿ ಮುಖಂಡ ಬಿ.ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT