ಮುಂಜಾನೆ ಮಾರುಕಟ್ಟೆಯಿಂದ ಜೀವನ ಸುಧಾರಣೆ

7
ತಾಜಾ ತರಕಾರಿಗಳು, ಹಣ್ಣುಗಳು, ಹೂಗಳು ಸೇರಿ ವಿವಿಧ ವಸ್ತು ಇಲ್ಲಿ ಲಭ್ಯ

ಮುಂಜಾನೆ ಮಾರುಕಟ್ಟೆಯಿಂದ ಜೀವನ ಸುಧಾರಣೆ

Published:
Updated:
Deccan Herald

ವಿಜಯಪುರ: ವಿವಿಧ ಬಗೆಯ ವ್ಯಾಪಾರ ವಹಿವಾಟುಗಳಿಗೆ ಹೆಸರುವಾಸಿಯಾಗಿರುವ ನಗರ, ಇಂದು ದಿನನಿತ್ಯ ಕೋಟ್ಯಂತರ ರೂಪಾಯಿ  ವಹಿವಾಟು ನಡೆಸುವ ಉದ್ಯಮಿಗಳಷ್ಟೇ ಅಲ್ಲದೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವಂತಹ ಸಣ್ಣ, ಸಣ್ಣ ವ್ಯಾಪಾರಸ್ಥರಿಗೂ ಮಾರುಕಟ್ಟೆಯಾಗಿ ಇಲ್ಲಿನ ರಸ್ತೆಗಳು ಮಾರ್ಪಾಡಾಗಿವೆ.

ಇಲ್ಲಿನ ಗಾಂಧಿಚೌಕದ ಬಳಿಯಿರುವ ಬೆಳಗಿನ ಮಾರುಕಟ್ಟೆಯ ರಸ್ತೆಯೆಂದೆ ಖ್ಯಾತಿಯನ್ನು ಪಡೆದುಕೊಂಡಿರುವ ರಸ್ತೆಯಲ್ಲೆ ದಿನನಿತ್ಯ ನೂರಾರು ಮಂದಿ ಬೀದಿ ಬದಿ ವ್ಯಾಪಾರಿಗಳು ಜೀವನ ಮಾಡುತ್ತಿದ್ದಾರೆ. ದಿನಬೆಳಗಾದರೆ, ತಾಜಾ ತರಕಾರಿಗಳು, ಹಣ್ಣುಗಳು, ಹೂಗಳು ಸೇರಿದಂತೆ ಜನರ ಅಗತ್ಯಕ್ಕೆ ಅನುಗುಣವಾದ ವಸ್ತುಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ.

ಬೆಳಿಗ್ಗೆ 6 ಗಂಟೆಗೆ ಆರಂಭವಾಗುವ ಮಾರುಕಟ್ಟೆ 10 ಗಂಟೆಗೆ ಮುಕ್ತಾಯವಾಗುತ್ತದೆ. ಇಲ್ಲಿನ ಬಹುತೇಕ ಜನರು ವಾರದ ಸಂತೆಗೆ ಹೋಗುವುದು ಕಡಿಮೆ, ಪ್ರತಿನಿತ್ಯ ಬೆಳಗ್ಗೆ ಬೆಳಗಿನ ಮಾರುಕಟ್ಟೆಗೆ ಬರುವ ಗ್ರಾಹಕರು ತಮಗೆ ಬೇಕಾಗಿರುವ ತಾಜಾ ತರಕಾರಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಾರೆ. ದಿನನಿತ್ಯ ಪೂಜೆ ಪುನಸ್ಕಾರಗಳಿಗೆ ಬೇಕಾಗುವ ಹೂಗಳನ್ನು ಇಲ್ಲೆ ಖರೀದಿ ಮಾಡುತ್ತಾರೆ. ಇದರಿಂದ ನೂರಾರು ಮಂದಿಯ ವ್ಯಾಪಾರಸ್ಥರಿಗೆ ಈ ರಸ್ತೆ ಆಶ್ರಯವಾಗಿದೆ.

ಇಲ್ಲಿ ಎಷ್ಟೇ ವ್ಯಾಪಾರ ವಹಿವಾಟುಗಳು ನಡೆದರೂ ಇಲ್ಲಿನ ಬೆಳಗಿನ ಮಾರುಕಟ್ಟೆ 60 ವರ್ಷಗಳಿಂದಲೂ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಮನೆಗಳ ಸಮೀಪದಲ್ಲಿನ ರಸ್ತೆಯಲ್ಲಿ ಮಾರುಕಟ್ಟೆ ನಡೆಯುವುದರಿಂದ ಮಕ್ಕಳೂ ನಿರ್ಭಯವಾಗಿ ಬಂದು ವ್ಯಾಪಾರ ಮಾಡುವುದನ್ನು ಕಲಿಯಲು ಅವಕಾಶವಾಗಿದೆ.

ಇದೇ ಮಾರುಕಟ್ಟೆ ಬಹಳಷ್ಟು ಮಂದಿಗೆ ವ್ಯಾಪಾರ ವಹಿವಾಟುಗಳನ್ನು ಕಲಿಸಿದೆ. ಹಲವು ಜೀವನವನ್ನೂ ರೂಪಿಸಿಕೊಂಡಿದ್ದಾರೆ. ವಾರದ ಸಂತೆಗೂ ಕಡಿಮೆಯಿಲ್ಲದಂತೆ ನಡೆಯುತ್ತಿದೆ.

‘ವಾರದ ಸಂತೆಗೆ ಹೋದರೆ ಅಲ್ಲಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಸಿಗುತ್ತವೆ. ಅಲ್ಲಿ ತರಕಾರಿಗಳನ್ನು ಖರೀದಿ ಮಾಡಿಕೊಂಡು ಬಂದ್ರೆ ವಾರ ಪೂರ್ತಿ ತಾಜಾ ಇರುವಂತೆ ನೋಡಿಕೊಳ್ಳಬೇಕು. ಅದರ ಬದಲಾಗಿ ಪ್ರತಿದಿನ ಬೆಳಿಗ್ಗೆ ನಮಗೆ ಎಷ್ಟು ಬೇಕೋ ಅಷ್ಟೆ ತರಕಾರಿಯನ್ನು ಇಲ್ಲೆ ಖರೀದಿ ಮಾಡುತ್ತೇವೆ. ಸಂತೆಯಲ್ಲಿ ಸಿಗುವ ದರಕ್ಕೆ ಇಲ್ಲಿ ಸಿಗುತ್ತವೆ’ ಎಂದು ಗ್ರಾಹಕಿ ಶೈಲಜಾ ಹೇಳುತ್ತಾರೆ .

‘ಇದರಿಂದ ನಾವು ತರಕಾರಿಗಳನ್ನು ಇಡಲು ಫ್ರಿಜ್‌ಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳಬೇಕಾಗಿಲ್ಲ, ಹಣವಿಲ್ಲವೆಂದರೂ ಪರಿಚಯದ ಮೇಲೆ ತರಕಾರಿಗಳು, ಸೊಪ್ಪು, ಹಣ್ಣು ಹಂಪಲುಗಳನ್ನು ವ್ಯಾಪಾರಸ್ಥರು ಕೊಟ್ಟು ಕಳುಹಿಸ್ತಾರೆ ಇಲ್ಲಿ ಬೆಳಗಿನ ವೇಳೆ ಮಾರುಕಟ್ಟೆ ನಡೆಯುವುದರಿಂದ ನಮಗೆ ತುಂಬಾ ಅನುಕೂಲವಾಗಿದೆ’ ಎಂದು ತಿಳಿಸಿದರು.

‘ನಾವು ಚಿಕ್ಕ ಹುಡುಗರಿದ್ದಾಗಿನಿಂದಲೂ ಬೆಳಗಿನ ವೇಳೆ ಇಲ್ಲೇ ವ್ಯಾಪಾರ ವಹಿವಾಟು ನಡೆಯುತ್ತದೆ. ನಾವೂ ಬಂದು ಇಲ್ಲೆ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದೆವು. ಈಗ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ’ ಎಂದು ವ್ಯಾಪಾರಿ ಭಾಗ್ಯಮ್ಮ ಹೇಳಿದರು .

‘ನಮ್ಮಂಥ ಬಡ ವ್ಯಾಪಾರಸ್ಥರು, ಅಂಗಡಿಗಳನ್ನು ಮಾಡಿಕೊಂಡು ಬಾಡಿಗೆ ಕಟ್ಟಿಕೊಂಡು ಜೀವನ ಮಾಡಲಿಕ್ಕೆ ಆಗಲ್ಲ, ಸಂತೆಗಳಿಗೆ ಹೋಗ್ತೀವಿ, ಅಲ್ಲಿ ಉಳಿದ ತರಕಾರಿಗಳನ್ನು ಬೆಳಿಗಿನ ಮಾರುಕಟ್ಟೆಗೆ ತಂದು ಮಾರಾಟ ಮಾಡಿಕೊಳ್ಳಲಿಕ್ಕೆ ಅವಕಾಶವಿದೆ. ಇದರಿಂದ ನಮಗೆ ನಷ್ಟವಾಗಲ್ಲ, ಇದರಿಂದ ನಮ್ಮ ಕುಟುಂಬಗಳ ನಿರ್ವಹಣೆಯೂ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !