ಶನಿವಾರ, ಮೇ 8, 2021
17 °C

ದರೋಡೆ: ಎಂಟು ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಜೈಲಿನಲ್ಲಿ ಸ್ನೇಹಿತರಾಗಿ ಹೊರಬಂದು ಗ್ಯಾಂಗ್ ಕಟ್ಟಿಕೊಂಡು ದರೋಡೆ, ಸುಲಿಗೆ, ಕಳವು ಪ್ರಕರಣಗಳಲ್ಲಿ ತೊಡಗಿದ್ದ 8 ಜನ ಆರೋಪಿಗಳನ್ನು ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಬಂಧನದಿಂದಾಗಿ ಮುಂದೆ ನಡೆಯಬಹುದಾಗಿದ್ದ ಮತ್ತಷ್ಟು ಕೃತ್ಯ ತಡೆಯುವಲ್ಲಿ ಸಹಕಾರಿಯಾಗಿದೆ ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಬಾರ್, ಪೆಟ್ರೋಲ್‌ ಬಂಕ್‌ ಹಾಗೂ ಒಂಟಿ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ದರೋಡೆ ನಡೆಸುತ್ತಿದ್ದರು. ರಾಜಾನುಕುಂಟೆ ರಚನ ಬಾರ್‌ ಕ್ಯಾಷಿಯರ್‌ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಾಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ತಂಡದಲ್ಲಿನ ಎಲ್ಲರೂ ಕೂಡ 20 ರಿಂದ 25 ವರ್ಷ ಒಳಗಿನವರೇ ಆಗಿದ್ದಾರೆ. ಬೆಂಗಳೂರಿನ ಲಗ್ಗೆರೆ, ಕೆಂಗೇರಿ ಹಾಗೂ ದೊಡ್ಡಬಳ್ಳಾಪುರದ ನಿವಾಸಿಗಳಾಗಿದ್ದಾರೆ.

ಬಂಧಿತರ ವಿಚಾರಣೆಯಿಂದ 9 ಕಳವು ಪ್ರಕರಗಳು ಪತ್ತೆಯಾಗಿವೆ. ₹11.90 ಲಕ್ಷದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್‌ವಶಕ್ಕೆ ಪಡೆಯಲಾಗಿದೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳ ಸಹಕಾರದೊಂದಿಗೆ ಆರೋಪಿಗಳಾದ ಅದ್ದೆ ಗ್ರಾಮದ ಚಿಕ್ಕೆಗೌಡ, ಭರತ್‌ಕುಮಾರ್, ಬೆಂಗಳೂರಿನ ಲಗ್ಗೆರೆಯ ತೇಜಸ್, ವಿನಯ್, ಕಾರ್ತಿಕ್, ವಿಕ್ರಂ, ಕೆಂಗೇರಿಯ ರಜತ್ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಚೇತನ್ ಬಂಧಿತರು.

ಪೊಲೀಸ್ ತಂಡಕ್ಕೆ ನಗದು ಬಹುಮಾನ: ಆರೋಪಿಗಳು ಮತ್ತು ದರೋಡೆಯಾಗಿದ್ದ ವಸ್ತುಗಳ ಪತ್ತೆಗೆ ಶ್ರಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್, ಸಬ್‌ಇನ್‌ಸ್ಪೆಕ್ಟರ್‌ ಎಂ.ಶಂಕರಪ್ಪ, ಶ್ರೀಮನ್‌ರಾಜ್, ಸೋಮಶೇಖರ್, ಸಿಬ್ಬಂದಿ ಶ್ರೀನಿವಾಸಯ್ಯ, ಸಿ.ಎನ್.ಕೃಷ್ಣ,ವೆಂಕಟೇಶ್, ಮುನಿರಾಜು,ರಾಧಾಕೃಷ್ಣ, ಶಿವರಾಜ್‌,ಕುಮಾರ್, ನಾರಾಯಣಸ್ವಾಮಿ, ಮಂಜುನಾಥ್, ಹರಿಪ್ರಸಾದ್, ಜಗದೀಶ್‌ಕುಮಾರ್, ಮಂಜುನಾಥ್, ಪ್ರಕಾಶ್, ವಿಠಲ್‌ಉಳವಿ, ಶ್ರೀಶೈಲ ವಾಲೀಕಾರ, ಪಾಂಡುರಂಗ, ಕುಮಾರ್, ಸುನೀಲ್‌ಬಾಸಗಿ ಹಾಗೂ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಪೊಲೀಸ್‌ ಸಿಬ್ಬಂದಿಗೆ ₹30 ನಗದು ಬಹುಮಾನ ನೀಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಡಿವೈಎಎಸ್‌ಪಿ ಟಿ.ರಂಗಪ್ಪ ಇದ್ದರು. ಇದೇ ಸಂದರ್ಭದಲ್ಲಿ ದರೋಡೆಕೋರರು ಕಳವು ಮಾಡಿದ್ದ ಚಿನ್ನಾಭರಣ  ಮಾಲೀಕರಿಗೆ ಹಿಂದಿರುಗಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು