ಮಂಗಳವಾರ, ಮಾರ್ಚ್ 31, 2020
19 °C

ಸಂಪಿಗೆ ಮರ ಕಡಿದು ಹಾಕಿದ ಕಿಡಿಗೇಡಿಗಳು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಇಲ್ಲಿನ ಸಣ್ಣ ಅಮಾನಿಕೆರೆ ಗ್ರಾಮದ ರೈತ ವೆಂಕಟೇಶ್ ಜಮೀನಿನಲ್ಲಿ ಹುಲುಸಾಗಿ ಬೆಳೆದು ದಿನನಿತ್ಯ ಜೀವನದ ನಿರ್ವಹಣೆಗೆ ಆಧಾರವಾಗಿದ್ದ ಸಂಪಿಗೆ ಮರಗಳನ್ನು ಕಿಡಿಗೇಡಿಗಳು ಕಡಿದುಹಾಕಿದ್ದಾರೆ.

ರೈತ ವೆಂಕಟೇಶ್‌ ಮಾತನಾಡಿ, ‘24 ಗುಂಟೆ ಸ್ವತ್ತಿನ ಪೈಕಿ 20 ಗುಂಟೆಯಲ್ಲಿ ಐದು ವರ್ಷಗಳಿಂದ ₹6 ಲಕ್ಷ ವೆಚ್ಚ ಮಾಡಿ ಇವುಗಳನ್ನು ಬೆಳೆಸಲಾಗಿತ್ತು. ಒಂದು ತಿಂಗಳಿಂದ ಸಂಪಿಗೆ ಮರದಲ್ಲಿ ಹೂವು ಬಿಡಲು ಆರಂಭಗೊಂಡಿತ್ತು. ಹತ್ತಾರು ಕೆ.ಜಿಯಿಂದ ಆರಂಭಗೊಂಡು ಸಿಗುತ್ತಿದ್ದ ಹೂವು ಪ್ರಸ್ತುತ 30 ರಿಂದ 35 ಕೆ.ಜೆ ಯ ವರೆಗೆ ಸಿಗುತ್ತಿತ್ತು’ ಎಂದರು.

‘ಪ್ರತಿ ಕೆಜಿಗೆ ಹೂವಿನ ಬೆಲೆ ₹150 ರಿಂದ ₹200 ಇದೆ. ಇದನ್ನೇ ನಂಬಿಕೊಂಡಿರುವ ನಮಗೆ ಯಾರು ಮರ ಕಡಿದು ಹಾಕಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.  ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಶಾಮಪ್ಪ ಮಾತನಾಡಿ, 140 ಮರಗಳನ್ನು ಬೆಳೆಸಲು ರೈತ ಪಟ್ಟಿರುವ ಶ್ರಮ ಕ್ಷಣದಲ್ಲೇ ಮಣ್ಣು ಪಾಲಾಗಿದೆ. ಪೂರ್ವ ನಿಯೋಜನೆಯೊಂದಿಗೆ ಹೂವಿನ ಫಸಲು ಬಂದ ನಂತರವೇ ಮರಗಳ ಹನನವಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದರೂ ಸ್ಥಳ ಪರಿಶೀಲನೆಗೆ ಬಂದಿಲ್ಲ. ಪ್ರಕರಣ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಪೊಲೀಸರ ನಡೆಯೇ ಸಂಶಯಕ್ಕೆ ಎಡೆ ಮಾಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಮಾಯಕ ರೈತರಿಗೆ ನ್ಯಾಯ ಸಿಗುತ್ತದೆ ಎನ್ನುವ ಖಾತರಿಯಾದರೂ ಏನು’ ಎಂದು ಪ್ರಶ್ನಿಸಿದರು.

‘ಸಂಪಿಗೆ ಹೂವಿನ ಫಸಲು ಒಂದೆರಡು ವರ್ಷಕ್ಕೆ ಸಮಾಪ್ತಿ ಆಗುವುದಿಲ್ಲ. ದೀರ್ಘಾವಧಿ ಬೆಳೆ ಮನುಷ್ಯನಿಗೆ ದ್ವೇಷ, ಅಸೂಯೆ ಸಹಜ; ಮಗುವಿನಂತಿರುವ ಎಳೆಯ ಮರಗಳನ್ನು ಕಡಿದು ಸಾಧಿಸಿರುವುದಾದರೂ ಏನು. ಯಾವ ಪುರುಷಾರ್ಥಕ್ಕೆ ಕಿಡಿಗೇಡಿಗಳು ಈ ಕೆಲಸ ಮಾಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ಮಂಜುನಾಥ್, ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ನಾಗೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು