ಶನಿವಾರ, ಮೇ 21, 2022
28 °C
ವಿಜಯಪುರದಲ್ಲಿ ಮಂಗಳವಾದ್ಯಗಳೊಂದಿಗೆ ರಾಸುಗಳ ಮೆರವಣಿಗೆ

ಸಂಕ್ರಾಂತಿ– ಕಿಚ್ಚು ಹಾರಿದ ಎತ್ತುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಮೃದ್ಧಿಯ ಸಂಕೇತವಾದ ಮಕರ ಸಂಕ್ರಾಂತಿ ಹಬ್ಬವನ್ನು ತಾಲ್ಲೂಕಿನಾಧ್ಯಂತ ಬುಧವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಹಳ್ಳಿ, ನಗರಗಳ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಮಂಗಳಾರತಿ ಕೈಂಕರ್ಯಗಳು ನಡೆದವು.

ಸೂರ್ಯೋದಯಕ್ಕೂ ಮುನ್ನವೇ ಎದ್ದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿದ ಜನರು ದೇವಸ್ಥಾನಗಳಿಗೆ ತೆರಳಿ ಎಳ್ಳೆಣ್ಣೆ ದೀಪ ಹಚ್ಚುತ್ತಿದ್ದರು. ಉತ್ತರಾಯಣ ಪುಣ್ಯಕಾಲದ ಅಂಗವಾಗಿ ಸೂರ್ಯನಿಗೆ ಪೂಜೆ ಸಲ್ಲಿಸಿ, ನಮಸ್ಕರಿಸುತ್ತಿದ್ದರು.

ಕೆಲವರು ಸಂಕ್ರಾಂತಿ ಪುಣ್ಯ ಕಾಲದ ಸ್ನಾನ ಮಾಡುವ ಉದ್ದೇಶಗಳಿಂದ ಪರಸ್ಥಳಗಳಿಗೆ ಪ್ರವಾಸ ಹೊರಟರು. ಜನರು ನೆರೆಯವರಿಗೆ ಬಂಧು ಮಿತ್ರರಿಗೆ ಎಳ್ಳು ಬೆಲ್ಲ, ಕಬ್ಬಿನ ಜಲ್ಲೆ ಹಂಚು ಮೂಲಕ ಹಬ್ಬದ ಶುಭ ಕೋರುತ್ತಿದ್ದರು.

ಬೆಳಿಗ್ಗೆ ಜಾನುವಾರ ಮೈತೊಳೆದು ಸ್ವಚ್ಛಗೊಳಿಸಿದ ಗ್ರಾಮೀಣ ಪ್ರದೇಶಗಳ ಜನರು ಸುಗ್ಗಿಯ ಹಬ್ಬದ ಅಂಗವಾಗಿ ರಾಸುಗಳನ್ನು ಬಗೆ ಬಗೆಯಲ್ಲಿ ಶೃಂಗರಿಸಿ, ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಸಂಜೆ ವೇಳೆ ಕಿಚ್ಚು ಹಾಯಿಸಿ ಸಂಭ್ರಮಪಟ್ಟರು. ಹಬ್ಬದ ಪ್ರಯುಕ್ತ ಮಹಿಳೆಯರು ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದ್ದರು.

ಹಬ್ಬದ ನಿಮಿತ್ತ ಸಜ್ಜೆ, ಜೋಳದ ರೊಟ್ಟಿ, ಚಪಾತಿ, ಎಣ್ಣೆಗಾಯಿ, ಬಗೆ ಬಗೆ ಚಟ್ನಿಗಳು, ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಬಂಧು ಬಳಗದವರೆಲ್ಲ ಸೇರಿ ಸಂಭ್ರಮದಿಂದ ಹಬ್ಬ ಆಚರಿಸಿ, ಊಟ ಸವಿದರು. ಸಂಜೆ ವೇಳೆ ದನಕರುಗಳಿಗೆ ಕಿಚ್ಚು ಹಾಯಿಸುತ್ತಿದ್ದ ದೃಶ್ಯಗಳು ಗಮನ ಸೆಳೆದವು.

ಇಲ್ಲಿನ ಕೆರೆಕೋಡಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಲಕ್ಷದೀಪೋತ್ಸವ ಆಯೋಜನೆ ಮಾಡಲಾಗಿತ್ತು. ಪಲ್ಲಕ್ಕಿಯಲ್ಲಿ ಅಯ್ಯಪ್ಪಸ್ವಾಮಿಯ ಉತ್ಸವ ಮೂರ್ತಿಯನ್ನು ಇಲ್ಲಿನ ಪ್ರಮುಖಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯ, ಚನ್ನಕೇಶವಸ್ವಾಮಿ ದೇವಾಲಯ, ವೆಂಕಟರಮಣಸ್ವಾಮಿ ದೇವಾಲಯ, ಎಲ್ಲಮ್ಮದೇವಿ ದೇವಾಲಯ, ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇವಾಲಯ, ದುರ್ಗಾತಾಯಿ ದೇವಾಲಯ, ಭಟ್ರೇನಹಳ್ಳಿ ನರಸಿಂಹಸ್ವಾಮಿ ದೇವಾಲಯ, ಬಯಲು ಬಸವೇಶ್ವರಸ್ವಾಮಿ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು