ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲುಕುಡಿ ಬೆಟ್ಟ ಉಳಿಸಿ...

ಗ್ರಾಮಗಳ ಮುಖಂಡರಿಂದ ಲೋಕಾಯುಕ್ತರಿಗೆ ದೂರು
Last Updated 24 ಜೂನ್ 2022, 3:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಗಣಿಗಾರಿಕೆಯಿಂದ ಹಾಳಾಗುತ್ತಿರುವ ಹುಲುಕುಡಿ ಬೆಟ್ಟದ ಪರಿಸರವನ್ನು ಉಳಿಸುವಂತೆ ಈ ವ್ಯಾಪ್ತಿಯ ಗ್ರಾಮಗಳ ಹಿರಿಯ ಮುಖಂಡರಾದ ಹನುಮಂತಪ್ಪ ರಾಯಪ್ಪ, ರುದ್ರೇಗೌಡ ಅವರು ಲೋಕಾಯುಕ್ತರನ್ನು ಮನವಿ ಮಾಡಿಕೊಂಡ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಸಾರ್ವಜನಿಕ ಕುಂದುಕೊರತೆಗಳ ಕುರಿತು ಅರ್ಜಿ ಸ್ವೀಕರಿಸಿದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಅವರಿಗೆ ಸಮಸ್ಯೆಗಳನ್ನು ವಿವರಿಸಿದರು.

‘ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಈ ವ್ಯಾಪ್ತಿಯ ಪರಿಸರ ಹಾಳಾಗುತ್ತಿದೆ. ಗಣಿಗಾರಿಕೆ ನಿಯಮ ಉಲ್ಲಂಘಿಸಿ ಡೈನಮೈಟ್ ಬಳಕೆ, ರಸ್ತೆಯ ಭಾರ ಮೀತಿ ಅನ್ವಯವೇ ಇಲ್ಲದಂತೆ ಕಲ್ಲುಗಳ ಸಾಗಾಟದಿಂದಾಗಿ ಈ ವ್ಯಾಪ್ತಿಯ ಅರಣ್ಯ, ವಸತಿ ಪ್ರದೇಶ ಹಾಳಾಗುತ್ತಿದೆ. ಮಿತಿ ಮೀರಿದ ಡೈನಮೈಟ್ ಬಳಕೆಯಿಂದ, ವನ್ಯ ಜೀವಿಗಳು ಪಲಾಯನ ಮಾಡುತ್ತಿವೆ. ಭೂಮಿಯೊಳಗಿನ ಬಂಡೆಗಳು ಜರುಗಿ ಕೊಳವೆ ಬಾವಿಗಳು ನೀರು ಬಾರದಂತಾಗುತ್ತಿವೆ. ಈ ಕುರಿತಂತೆ ಪರಿಸರ ಇಲಾಖೆ, ಗಣಿಗಾರಿಕೆ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದರು ಸ್ಪಂದಿಸುತ್ತಿಲ್ಲ’ ಎಂದರು.

ಮೆಳೇಕೋಟೆ ಕ್ರಾಸ್ ನಿವಾಸಿ ಉಮಾ ಎನ್ನುವವರು ವಾಸವಿರುವ ಮನೆಯ ವಸತಿ ದೃಢೀಕರಣ ಪತ್ರಕ್ಕಾಗಿ ಮೆಳೇಕೋಟೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದರು, ದೃಢೀಕರಣ ಪತ್ರ ನೀಡದೇ ಅಧಿಕಾರಿಗಳು ಅಲೆಸುತ್ತಿದ್ದಾರೆ ಎಂದು ಪಿಡಿಒ ವಿರುದ್ಧ ದೂರು ನೀಡಿದರು.

ಸಾಗುವಳಿ ಚೀಟಿ ಇದ್ದರು, ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಕುರಿತು, ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು ಕೆಲಸ ಆಗುತ್ತಿಲ್ಲ ಎಂದು ತಹಶೀಲ್ದಾರ್ ವಿರುದ್ಧ ಸಭೆಯಲ್ಲಿ ಮಹಿಳೆಯೊಬ್ಬರು ದೂರಿದರು.

ವಸತಿ ಮನೆ ನೀಡದ ಕುರಿತು ನಗರಸಭೆ ಅಧಿಕಾರಿಗಳ ವಿರುದ್ಧ, ದೊಡ್ಡಹೆಜ್ಜಾಜಿ ಗ್ರಾಮದಲ್ಲಿ ಸರ್ಕಾರಿ ರಸ್ತೆಯನ್ನೇ ಬದಲಿಸಿ ಖಾತೆ ಮಾಡಿಕೊಟ್ಟಿರುವುದು ಸೇರಿದಂತೆ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಕುರಿತು ಅನೇಕ ದೂರುಗಳನ್ನು ಸಾರ್ವಜನಿಕರು ಲೋಕಾಯುಕ್ತರಿಗೆ ನೀಡಿದರು.

ಅರ್ಜಿ ಸ್ವೀಕಾರಕ್ಕು ಮುನ್ನ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಕುರಿತು ಮಾತನಾಡಿದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು, ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಲು ಕಚೇರಿಗೆ ಬರುವ ಫಲಾನುಭವಿಗಳಿಗೆ, ಯೋಜನೆಗೆ ಬೇಕಾದ ದಾಖಲೆಗಳ ಕುರಿತಂತೆ ತಾಳ್ಮೆಯಿಂದ ವಿವರಿಸಿದರೆ ಶೇ 90 ಸಮಸ್ಯೆಗಳನ್ನು ಕಚೇರಿಯಲ್ಲಿಯೇ ಪರಿಹರಿಸಬಹುದಾಗಿದೆ. ಅಧಿಕಾರಿಗಳಿಗೆ ದಿನ ನಿತ್ಯ ನೂರಾರು ಒತ್ತಡದ ಕಾರ್ಯ ಇರುತ್ತದೆ ಎಂಬುದು ತಿಳಿದಿದೆ. ಆದರೆ ಸಾರ್ವಜನಿಕರ ಸಮಸ್ಯೆ ಬಗೆ ಹರಿಸಲು, ಅರ್ಹರಿಗೆ ಸೌಲಭ್ಯ ತಲುಪಿಸಲು ತಾಳ್ಮೆವಹಿಸಿ ಸಾರ್ವಜನಿಕರಿಗೆ ನೀಡಬೇಕಾದ ದಾಖಲೆಗಳ ಕುರಿತು ಮಾರ್ಗದರ್ಶನ, ಯಾವ ಕಾರಣಕ್ಕೆ ಸೌಲಭ್ಯ ನೀಡಲಾಗುತ್ತಿಲ್ಲ ಎಂಬ ಕುರಿತು ಸೂಕ್ತ ಸಲಹೆ ಸೂಚನೆ ನೀಡಿ, ಸಮಸ್ಯೆ ಉದ್ಭವ ಆಗದಂತೆ ನೋಡಿಕೊಳ್ಳಬಹುದು ಎಂದರು.

ಅರ್ಜಿ ಸ್ವೀಕರಿಸಿದ ನಂತರ ಮಾತನಾಡಿದ ಲೋಕಾಯುಕ್ತ ಅಧಿಕಾರಿಗಳು, ಸ್ವೀಕರಿಸಲಾದ ಅರ್ಜಿಗಳ ಕುರಿತು ಎರಡು ವಾರಗಳಲ್ಲಿ ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೂರನೇ ವಾರಗಳ ಕಾಲ ಮೀತಿಯಲ್ಲಿ ಲೋಕಾಯುಕ್ತ ಕಚೇರಿಯಿಂದ ಅರ್ಜಿ ಪ್ರಗತಿ ಕುರಿತು ಮಾಹಿತಿ ನೀಡಲಾಗುವುದು,
ಆದಾಗ್ಯೂ ದೂರು ದಾಖಲಿಸಲು ಇಚ್ಚಿಸಿದಲ್ಲಿ ದೂರನ್ನು ನೀಡಬಹುದಾಗಿದೆ ಎಂದರು.

ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್, ಇನ್‌ಸ್ಪೆಕ್ಟರ್‌ ಶ್ರೀನಿವಾಸ್, ಮಹೇಶ್‌ಗೌಡ, ತಹಶೀಲ್ದಾರ್ ಮೋಹನಕುಮಾರಿ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್‌ಗೌಡ,ಡಿವೈಎಸ್‌ಪಿ ನಾಗರಾಜ್, ಸಬ್ ಇನ್‌ಸ್ಪೆಕ್ಟರ್‌ ಗೋವಿಂದ್, ನಗರಸಭೆ ಪೌರಾಯುಕ್ತ ಕೆ.ಜಿ.ಶಿವಶಂಕರ್ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT