ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವಿದ್ಯಾರ್ಥಿಯಲ್ಲಿ ಅಂಕ ಗಳಿಕೆ ಸಾಮರ್ಥ್ಯ

10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100‌ರಷ್ಟು ಅಂಕ ಗಳಿಸಿದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಅಭಿನಂದನೆ
Last Updated 20 ಮೇ 2019, 13:36 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಗುಣಾತ್ಮಕ ಅಂಕ ಗಳಿಸುವ ಸಾಮರ್ಥ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಹೇಳಿದರು.

ಇಲ್ಲಿನ ಅನಂತ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018–19ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100‌ರಷ್ಟು ಅಂಕಗಳಿಸಿದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ನಡೆದ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮಾಂತರ ಜಿಲ್ಲೆ ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಜಿಲ್ಲೆಗೆ ದೇವನಹಳ್ಳಿ ಪ್ರಥಮ ಸ್ಥಾನ ಹಾಗೂ ಗುಣಾತ್ಮಕ ಫಲಿತಾಂಶದಲ್ಲಿ ದೇವನಹಳ್ಳಿ ರಾಜ್ಯಮಟ್ಟದಲ್ಲಿ 5ನೇ ಸ್ಥಾನ ಪಡೆದಿದೆ. ಇದಕ್ಕೆ ವಿದ್ಯಾರ್ಥಿಗಳ, ಶಿಕ್ಷಕರ ಪರಿಶ್ರಮ ಕಾರಣ’ ಎಂದು ಶ್ಲಾಘಿಸಿದರು.

‘2017–18ನೇ ಸಾಲಿನಲ್ಲಿ ಗ್ರಾಮಾಂತರ ಜಿಲ್ಲೆ ರಾಜ್ಯಮಟ್ಟದ ಫಲಿತಾಂಶದಲ್ಲಿ 14ನೇ ಸ್ಥಾನ ಪಡೆದಿತ್ತು. ಗುಣಾತ್ಮಕ ಫಲಿತಾಂಶದಲ್ಲಿ 24ನೇ ಸ್ಥಾನ ಪಡೆದಿತ್ತು. ಫಲಿತಾಂಶ ಸುಧಾರಣೆಗೆ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಸಲಹೆ ಮೇರೆಗೆ ಶಿಕ್ಷಣ ತಜ್ಞ ಪ್ರೊ.ನಾಗರಾಜಯ್ಯ ಅವರನ್ನು ಕರೆಸಿ ಕ್ರಿಯಾ ಯೋಜನೆ ರೂಪಿಸಿದ ಪರಿಣಾಮ ಎಲ್ಲರ ಸಹಕಾರದಿಂದ ಉತ್ತಮ ಫಲಿತಾಂಶ ಬಂದಿದೆ’ ಎಂದರು.

‘18 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ, 120 ಮಕ್ಕಳ ಉತ್ತೀರ್ಣರಾಗಿದ್ದರೆ ರಾಜ್ಯಕ್ಕೆ ಜಿಲ್ಲೆ ಪ್ರಥಮ ಸ್ಥಾನ ಪಡೆಯಬಹುದಿತ್ತು. ಅನೇಕ ವಿದ್ಯಾರ್ಥಿಗಳು ತೀರ ಕಡಿಮೆ ಅಂಕಗಳಿಂದ ಅನುತ್ತೀರ್ಣರಾಗಿದ್ದಾರೆ. ಕಲಿಕೆಯಲ್ಲಿ ತೀರ ಹಿಂದುಳಿದ ವಿದ್ಯಾರ್ಥಿಯೊಬ್ಬ ಶೇ 83ರಷ್ಟು ಫಲಿತಾಂಶ ಪಡೆದಿದ್ದಾನೆ. ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದರೆ ಯಾವ ರೀತಿ ಫಲಿತಾಂಶ ಪಡೆಯಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶೈಕ್ಷಣಿಕ ಸಾಲಿನ ಆರಂಭದಲ್ಲಿ ಕ್ರಿಯಾಯೋಜನೆ ರೂಪಿಸಿ’ ಎಂದು ಹೇಳಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ‘ರಾಜ್ಯದಲ್ಲಿ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೇಂದ್ರಗಳಿವೆ. ದೇವನಹಳ್ಳಿ ರಾಜ್ಯಮಟ್ಟದ ಗುಣಾತ್ಮಕ ಫಲಿತಾಂಶದಲ್ಲಿ 5ನೇ ಸ್ಥಾನ ಪಡೆದಿರುವುದು ಎಲ್ಲ ಅಧಿಕಾರಿಗಳ, ಮುಖ್ಯಶಿಕ್ಷಕರ ಮತ್ತು ಸಹ ಶಿಕ್ಷಕರ ಸಹಕಾರದಿಂದ ಸಾಧ್ಯವಾಗಿದೆ’ ಎಂದು ಹೇಳಿದರು.

ಅನಂತ ವಿದ್ಯಾನಿಕೇತನ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎ.ವಿ.ನಾರಾಯಣಸ್ವಾಮಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ ಮಾತನಾಡಿ, ‘ಸಂಘಟಿತ ಪ್ರಯತ್ನದಿಂದ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. 22 ಶನಿವಾರ ವಿಶೇಷ ಪಾಠ ಬೋಧನೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಾಕಿಕೊಂಡಿದ್ದ ಗುಣಮಟ್ಟದ ಫಲಿತಾಂಶದ ಕಾರ್ಯಕ್ರಮದ ಚೌಕಟ್ಟು ಸಾಕಾರಗೊಂಡಿದ್ದರೂ 2019–20ನೇ ಶೈಕ್ಷಣಿಕ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಬರಲೇಬೇಕಾಗಿದೆ’ ಎಂದು ಹೇಳಿದರು.

ಶಿಕ್ಷಣ ತಜ್ಞ ನಾಗರಾಜಯ್ಯ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣಾ ಆಡಳಿತ ಮಂಡಳಿ ವ್ಯವಸ್ಥಾಪಕ ಹೇಮಂತ್ ಮಾತನಾಡಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ಘಟಕ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ವಿಷಯ ಪರಿವೀಕ್ಷಕರಾದ ಶ್ರೀನಿವಾಸ್, ಶ್ರೀಕಂಠ, ಪ್ರಾಂಶುಪಾಲೆ ಪದ್ಮಜಾ, ಮುಖಂಡ ಕೆಂಪೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT