ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು ಸಾಂಸ್ಕೃತಿಕ ರಾಯಭಾರಿಗಳಾಗಿ: ನಿಸರ್ಗ ನಾರಾಯಣಸ್ವಾಮಿ

ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಕಾರ್ಯಕ್ರಮ
Last Updated 17 ಸೆಪ್ಟೆಂಬರ್ 2018, 14:10 IST
ಅಕ್ಷರ ಗಾತ್ರ

ದೇವನಹಳ್ಳಿ: ದೇಶದ ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳಾಗಿ ಯುವ ಸಮಯದಾಯ ಮುಂದೆಬರಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಆಶಿಸಿದರು.

ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಂಗ ಮಂದಿರದಲ್ಲಿ ಸೋಮವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಾತೃ ಭೂಮಿ ಯುವ ಕಲಾವಿದರ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ.ಭಾರತ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಸಿರಿವಂತಿಕೆಯನ್ನು ಹೊಂದಿದೆ. ಇದನ್ನು ಉಳಿಸುವ ಜವಾಬ್ದಾರಿ ನಮ್ಮದು. ಸರ್ಕಾರ ಕಲೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಪ್ರೋತ್ಸಾಹ ನೀಡುತ್ತಿದೆ. ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಂತಕುಮಾರಿ ಮಾತನಾಡಿ, ಗ್ರಾಮೀಣ ಸೊಗಡಿನ ಕಲೆಗಳು ಉಳಿಯಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರತಿವರ್ಷ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಮೂಲಕ ಪ್ರತಿಭಾನ್ವಿತ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ನಂತರ ಅವರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷಣ್ ಗೌಡ ಮಾತನಾಡಿ, ಧಾರಾವಾಹಿಗಳಿಂದ ಮೂಲ ಜನಪದ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಟಿ.ವಿಯಿಂದ ಹೊರಬರುವ ಮನಸ್ಥಿತಿ ಕಡಿಮೆಯಾಗುತ್ತಿದೆ. ಕಲೆಯನ್ನು ಅದರ ಮೂಲ ಭಾಷೆಯಲ್ಲೆ ಉಳಿಸಬೇಕು. ಚರ್ಚಾ ಸ್ವರ್ಧೆ ವಿಷಯವನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಗೆ ಸಿಮಿತಗೊಳಿಸಿರುವ ಕ್ರಮ ಸರಿಯಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯ ಸಿಗದಿದ್ದರೆ ಹೇಗೆ. ಮುಂದಿನ ಬಾರಿ ಈ ರೀತಿ ಆಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಾಂಶುಪಾಲ ಶಿವಶಂಕರ್ ಮಾತನಾಡಿ, ಮೊಬೈಲ್, ಫೇಸ್‌ಬುಕ್, ವ್ಯಾಟ್ಸ್‌ ಆ್ಯಪ್‌ಗಳಿಂದ ಮೂಲ ಜನಪದ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಮಕ್ಕಳ ಬಗ್ಗೆ ಪೋಷಕರು ಮತ್ತು ಯುವ ಸಮುದಾಯ ಜಾಗೃತಿ ವಹಿಸಬೇಕು ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಮುನೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ ಮಾತನಾಡಿದರು. ಮಾತೃ ಭೂಮಿ ಯುವ ಕಲಾವಿದರ ಸಂಘ ಅಧ್ಯಕ್ಷ ಸುನೀಲ್, ಕಾರ್ಯದರ್ಶಿ ಮಹೇಶ್, ಕಲಾವಿದೆ ಡಾ.ನೀಲಾಂಬಿಕೆ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಮಹೇಶ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT