ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Shakti Scheme | 9.96 ಕೋಟಿ ಮಹಿಳೆಯರು ಪ್ರಯಾಣ: ರಾಮಲಿಂಗಾರೆಡ್ಡಿ

Published 30 ಜೂನ್ 2023, 16:01 IST
Last Updated 30 ಜೂನ್ 2023, 16:01 IST
ಅಕ್ಷರ ಗಾತ್ರ

ಆನೇಕಲ್ : ಸಾರಿಗೆ ಇಲಾಖೆಯ ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೆ 9.96 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ತಾಲ್ಲೂಕಿನ ಚಂದಾಪುರದಲ್ಲಿ ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ನಡೆದ ಮತದಾರರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಶಕ್ತಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಅಡಿಯಲ್ಲಿ 1.56 ಲಕ್ಷ ಟ್ರಿಪ್‌ಗಳು ಒಂದು ದಿನದಲ್ಲಿ ಬಸ್‌ಗಳು ಸಂಚರಿಸುತ್ತವೆ. ಪ್ರತಿನಿತ್ಯ ಸಂಚರಿಸುವ ಟ್ರಿಪ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಬಿಜೆಪಿ ಪಕ್ಷ ಅನವಶ್ಯಕ ಅಪಪ್ರಚಾರ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಮಹಿಳಾ ವಿರೋಧಿ ಸರ್ಕಾರವಾಗಿದೆ. ಹಾಗಾಗಿ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ದರ ನಿಗದಿ ಮಾಡುವಂತೆ ಒತ್ತಾಯಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಯಾವುದೇ ರೀತಿಯಾದ ಕಾಳಜಿಯಿಲ್ಲ. ಬಿಜೆಪಿಯ ಎಲ್ಲಾ ನಾಯಕರು ಸೋನಾಮಸೂರಿ ಅಕ್ಕಿ ತಿನ್ನುವರು ಹಾಗಾಗಿ ಬಡವರ ಹಸಿವು ಅವರಿಗೆ ಅರ್ಥವಾಗುವುದಿಲ್ಲ. ರಾಜಕೀಯ ಕಾರಣಗಳಿಗಾಗಿ 10 ಕೆಜಿ ಅಕ್ಕಿ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 600 ಆಶ್ವಾಸನೆ ನೀಡಿತು. ಈ ಪೈಕಿ ಕೇವಲ 60 ಆಶ್ವಾಸನೆ ಮಾತ್ರ ಈಡೇರಿಸಿದೆ. 2018ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ಪಕ್ಷದ ನಾಯಕರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಬುರುಡೆ ಜನರ ಪಕ್ಷವಾಗಿದೆ. ಪಕ್ಷದ ಐಟಿ ಸೆಲ್‌ನ ಮುಖ್ಯ ಕೆಲಸ ಸುಳ್ಳು ಹೇಳುವುದು. ನಾಗಪುರದಲ್ಲಿ ವ್ಯಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯವಿದೆ. ಅಲ್ಲಿ ಉತ್ಪತಿ ಆಗುವ ಸುಳ್ಳುಗಳನ್ನು ಇಲ್ಲಿನ ಜನರಿಗೆ ತಿಳಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಇಂತಹ ಅಪಪ್ರಚಾರ ಗಳಿಗೆ ಈಗಾಗಲೇ ಜನ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ವಿರೋಧ ಪಕ್ಷದಲ್ಲಿ ಇರಬೇಕೆಂದು ಜನ ನಿರ್ಧರಿಸಿದ್ದಾರೆ. ಎಡಬಿಡಂಗಿಗಳ ಪಕ್ಷವಾಗಿರುವ ಬಿಜೆಪಿ ಬಡವರಿಗೆ ಸಹಾಯ ಮಾಡುವುದಿಲ್ಲ ಮತ್ತು ಮಾಡುವವರನ್ನು ಬಿಡುವುದಿಲ್ಲ ಲೇವಡಿ ಮಾಡಿದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಶಕ್ತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಇದರಿಂದಾಗಿ ಮಹಿಳೆಯರು ಖುಷಿಯಿಂದ ಓಡಾಡುತ್ತಿದ್ದಾರೆ. ಕಾಂಗ್ರೆಸ್‌ ಜನಪರ ಕಾರ್ಯಕ್ರಮಗಳಿಂದಾಗಿ ಬಿಜೆಪಿ ನಾಯಕರಿಗೆ ಹೊಟ್ಟೆ ಉರಿ ಪ್ರಾರಂಭವಾಗಿದೆ. ಬಿಜೆಪಿಯವರು ಜನರ ಕಣ್ಣಿಗೆ ಬೂದಿ ಎರಚುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ದರ ಕಡಿಮೆ ಮಾಡುವಂತೆ ಬಿಜೆಪಿ ಸಂಸದರು ಪ್ರಧಾನಿ ಮಂತ್ರಿಗಳಿಗೆ ಮನವಿ ಮಾಡಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ 65 ಲಕ್ಷ ಮಂದಿ ನೋಂದಣಿಯಾಗಿದ್ದಾರೆ. ಚುನಾವಣೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ಈಡೇರಿಸುತ್ತದೆ. ಅಭಿವೃದ್ಧಿಯಲ್ಲಿ ಧರ್ಮ ಮತ್ತು ಪಕ್ಷವನ್ನು ಬೆರಸುವುದಿಲ್ಲ ಎಂದು ಹೇಳಿದರು.

ಶಾಸಕ ಬಿ ಶಿವಣ್ಣ ಮಾತನಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ಆರ್‌.ಮನೋಹರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಗೌಡ, ಕೆಪಿಸಿಸಿ ಕಾರ್ಯದರ್ಶಿ ಎಂ.ಬಾಬುರೆಡ್ಡಿ, ಬಮೂಲ್‌ ಮಾಜಿ ಅಧ್ಯಕ್ಷ ಆರ್‌.ಕೆ.ರಮೇಶ್‌, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಐ.ಸೋಮಶೇಖರರೆಡ್ಡಿ, ಮುಖಂಡರಾದ ಪಟಾಪಟ್‌ ನಾಗರಾಜು, ಕೆ.ಸಿ.ರಾಮಚಂದ್ರ, ಗಟ್ಟಹಳ್ಳಿ ಸೀನಪ್ಪ, ಎನ್‌.ಬಿ.ಐ.ನಾಗರಾಜು, ಸ್ವಾತೇಗೌಡ, ಮುನಿವೀರಪ್ಪ, ರಾಮೋಜಿಗೌಡ, ಪ್ರಭಾಕರರೆಡ್ಡಿ, ಜಯಶಂಕರ್, ಪುರುಷೋತ್ತಮರೆಡ್ಡಿ, ಸಿಡಿಹೊಸಕೋಟೆ ಚಿನ್ನಪ್ಪ ಇದ್ದರು.

ಆನೇಕಲ್‌ ತಾಲ್ಲೂಕಿನ ಚಂದಾಪುರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಆನೇಕಲ್‌ ತಾಲ್ಲೂಕಿನವರಾದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು
ಆನೇಕಲ್‌ ತಾಲ್ಲೂಕಿನ ಚಂದಾಪುರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಆನೇಕಲ್‌ ತಾಲ್ಲೂಕಿನವರಾದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು

Cut-off box - ಆನೇಕಲ್‌ ಅಭಿವೃದ್ಧಿ ಗುರಿ ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಆನೇಕಲ್ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಸರ್ಕಾರದ ಗುರಿ. ಸುಸಜ್ಜಿತ ಸಂಪರ್ಕ ರಸ್ತೆ ಬಡವರಿಗೆ ಸೂರು ಕಲ್ಪಿಸುವುದು ಮೆಟ್ರೋ ರೈಲು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.  ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿಗಾಗಿ 106 ಕೋಟಿ ರೂ ಅನುದಾನಕ್ಕೆ ಸರ್ಕಾರದ ಅನುಮೋದನೆ ದೊರೆತಿದೆ ಎಂದು ತಿಳಿಸಿದರು. *** ಎಲ್ಲ ಗ್ರಾಮಗಳಿಗೂ ಕಾವೇರಿ ಆನೇಕಲ್ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಕಾವೇರಿ ನೀರು ನೀಡುವುದು ನಮ್ಮ ಬದ್ಧತೆಯಾಗಿದೆ. ಈ ಮೂಲಕ ಅತ್ಯಧಿಕ ಮತಗಳಿಂದ ಗೆಲ್ಲಿಸಿದ ಮತದಾರರ ಋಣ ತೀರಿಸಲಾಗುವುದು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ಬೊಮ್ಮಸಂದ್ರ ವರೆಗೆ ಮೆಟ್ರೋ ಯೋಜನೆ ಜಾರಿಯಾಗಿದ್ದು ಪ್ರಗತಿ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅತ್ತಿಬೆಲೆ ಆನೇಕಲ್ ಜಿಗಣಿವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗುವುದು ಈ ಬಗ್ಗೆ ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದೆ. ಸಾರಿಗೆ ಸಂಪರ್ಕಕ್ಕೆ ಬಲ ನೀಡುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT