ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಗಂಗೆಯಲ್ಲಿ ಜಾನುವಾರು ಜಾತ್ರೆ

Last Updated 30 ಡಿಸೆಂಬರ್ 2018, 19:40 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ರಾಜ್ಯದಲ್ಲಿ ಹೆಸರಾಗಿರುವ ಗಂಗಾಧರೇಶ್ವರ ಜಾನುವಾರು ಜಾತ್ರೆಯು ಶಿವಗಂಗೆಯ ಹಿಪ್ಪೆ ತೋಪಿನಲ್ಲಿ ನಡೆಯುತ್ತಿದೆ.

ಈ ಬಾರಿಯ ಜಾತ್ರೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರಾಸುಗಳು ಸೇರಿವೆ. ಅವುಗಳಲ್ಲಿ ನಾಟಿ ತಳಿಗಳಾದ ಅಮೃತ್ ಮಹಲ್, ಹಳ್ಳಿಕಾರ್ ಪಶುಗಳು ವಿಶೇಷವಾಗಿವೆ. ₹ 50 ಸಾವಿರದಿಂದ ₹ 2 ಲಕ್ಷದವರೆಗೂ ರಾಸುಗಳು ಮಾರಾಟವಾಗುತ್ತಿವೆ.ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ,ತುಮಕೂರು, ಹಾಸನ,ಕೋಲಾರ ಮಾತ್ರವಲ್ಲದೆ ತೆಲಂಗಾಣದಿಂದಲೂ ರೈತರು ರಾಸುಗಳನ್ನು ಕರೆ ತಂದಿದ್ದಾರೆ.

ಮಳೆಯ ಅಭಾವ, ಮೇವಿನ ಕೊರತೆ ಹಾಗೂ ಸಾಕಾಣಿಕೆ ವೆಚ್ಚದ ಹೆಚ್ಚಳದಿಂದಾಗಿ ರಾಸುಗಳ ಸಾಕಾಣಿಕೆಯಿಂದ ಗ್ರಾಮೀಣ ವಾಸಿಗಳು ವಿಮುಖರಾಗುತ್ತಿದ್ದಾರೆ. ಈ ಭಾಗದಲ್ಲಿ ಗ್ರಾಮೀಣ ಸೊಗಡಿನ ವಿಶಿಷ್ಟ ಛಾಪು ಮೂಡಿಸಿದ್ದ ಈ ಜಾತ್ರೆ ತನ್ನ ಮೂಲ ವೈಭವವನ್ನು ಈಗ ಕಳೆದುಕೊಂಡಿದೆ.

‘ಹತ್ತು ವರ್ಷಗಳ ಹಿಂದೆ ಜಾತ್ರೆ ನಡೆಯುವ ದಿನ ತಿಳಿದುಕೊಂಡು ಪಾತ್ರೆ, ಹುಲ್ಲು, ದವಸ–ಧಾನ್ಯಗಳೊಂದಿಗೆ ಗಾಡಿ ಕಟ್ಟಿಕೊಂಡು ಬರುತ್ತಿದ್ದೆವು. ವಾರಗಟ್ಟಲೇ ಜಾತ್ರೆಯಲ್ಲಿ ಉಳಿದುಕೊಳ್ಳುತ್ತಿದ್ದೆವು. ತಂದಿದ್ದ ರಾಸುಗಳನ್ನು ಮಾರಿ, ಬೇಕಾದ ಕೃಷಿ ಉಪಕರಣ ಖರೀದಿಸಿಕೊಂಡು ಹೋಗುತ್ತಿದ್ದೆವು. ಈಗ ಜಾತ್ರೆಯಲ್ಲಿ ಕೊಡುವ ಬಹುಮಾನಕ್ಕಾಗಿ ರಾಸುಗಳನ್ನು ಸಾಕುತ್ತಿದ್ದಾರೆ. ಜಾತ್ರೆಯು ಪ್ರತಿವರ್ಷ ಕಳೆಗುಂದುತ್ತಿದೆ’ ಎಂದು ಹಲವಾರು ವರ್ಷಗಳಿಂದ ಜಾತ್ರೆಗೆ ಬರುತ್ತಿರುವ ರೈತರೊಬ್ಬರು ತಿಳಿಸಿದರು.

ಜಾನುವಾರುಗಳಿಗೆ ಬೇಕಾದ ಹಗ್ಗ, ಮೂಗುದಾರ, ಗೆಜ್ಜೆ, ದಂಡೆಗಳ ಮಾರಾಟ ಈ ಮೇಳದಲ್ಲಿದೆ. ಹಗ್ಗ ₹80, ಮೂಗುದಾರ ₹ 50, ಗೆಜ್ಜೆ ₹ 250, ಬಾರುಗೋಲು ₹80ಕ್ಕೆ ಮಾರಾಟವಾಗುತ್ತಿವೆ.

ಮುಜರಾಯಿ ಇಲಾಖೆಯು ರೈತರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ. ಜಾತ್ರೆ ನಡೆಯುವ ಜಾಗದಲ್ಲಿನ ಮುಳ್ಳು ಗಿಡಗಳನ್ನು ತೆಗೆದಿಲ್ಲ ಎನ್ನುವ ದೂರು ರೈತರಿಂದ ಕೇಳಿಬಂತು. ರೈತರು ತಂಗಲು ಸೂಕ್ತ ವ್ಯವಸ್ಥೆಯನ್ನೂ ಮಾಡಿಲ್ಲ. ಹಿಪ್ಪೆ ತೋಪಿನ ಅಂದಾಜು 2 ಎಕರೆ ಜಾಗದಲ್ಲಿ ಯಾತ್ರಿ ನಿವಾಸ ಮತ್ತು ಪ್ರವಾಸಿ ಮಂದಿರ ನಿರ್ಮಾಣ ಮಾಡಲಾಗಿದೆ. ಇದರಿಂದ ರಾಸುಗಳನ್ನು ಕಟ್ಟಲು ಜಾಗದ ಕೊರತೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT