ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದ ಕಂಬಕ್ಕೆ ಗುದ್ದಿದ ಶಟಲ್‌ ಬಸ್‌; ಹತ್ತು ಮಂದಿಗೆ ಗಾಯ

Published 19 ಜೂನ್ 2023, 3:19 IST
Last Updated 19 ಜೂನ್ 2023, 3:19 IST
ಅಕ್ಷರ ಗಾತ್ರ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳ ನಡುವೆ ಸಂಚರಿಸುವ ಎಲೆಕ್ಟ್ರಿಕ್ ಶಟಲ್‌ ಬಸ್‌ ಭಾನುವಾರ ಬೆಳಗಿನ ಜಾವ ವಿಮಾನ ನಿಲ್ದಾಣದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಹತ್ತು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಬೆಳಗಿನ ಜಾವ 5.15ರ ಸುಮಾರು ಟರ್ಮಿನಲ್‌–2ರಿಂದ ಟರ್ಮಿನಲ್‌ 1ಕ್ಕೆ ಪ್ರಯಾಣಿಕರನ್ನು ಕರೆ ತರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 17 ಮಂದಿ ಬಸ್‌ನಲ್ಲಿದ್ದರು. ಗಾಯಾಳುಗಳನ್ನು ವಿಮಾನ ನಿಲ್ದಾಣದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹತ್ತಾರು ತಾಸು ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ್ದ ಚಾಲಕ ದಣಿದಿದ್ದ ಎಂದು ತಿಳಿದು ಬಂದಿದೆ. ಬೆಳಗಿನ ಜಾವ ಚಾಲಕನಿಗೆ ನಿದ್ದೆಯ ಮಂಪರು ಕವಿದ ಕಾರಣ ಅಪಘಾತವಾಗಿರುವ ಸಾಧ್ಯತೆ ಇದೆ. ತನಿಖೆ ನಂತರವಷ್ಟೇ ಅಪಘಾತಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ. 

ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಟಲ್‌ ಬಸ್‌ ಸೇವೆ ಗುತ್ತಿಗೆ ಪಡೆದಿರುವ ‘ಏರ್‌ ಇಂಡಿಯಾ ಸಾಟ್ಸ್‌’ ಸಂಸ್ಥೆಯ ಮ್ಯಾನೇಜರ್ ವಿಚಾರಣೆ ನಡೆದಿದೆ.

ಟರ್ಮಿನಲ್‌ಗಳ ನಡುವೆ ತಾರತಮ್ಯ

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌–1 ಮತ್ತು 2ರ ನಡುವಿನ ಸೇವೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಟರ್ಮಿನಲ್‌ -2 ಕಾಮಗಾರಿಯೂ ಇನ್ನೂ ಪೂರ್ಣ ಪ್ರಯಾಣದಲ್ಲಿ ಮುಗಿದಿಲ್ಲ, ಹೀಗಾಗಿ ಅಲ್ಲಿಂದ ಕ್ಯಾಬ್‌, ಬಿಎಂಟಿಸಿಯ ವಾಯು ವಜ್ರ ಸೇವೆಯೂ ಲಭ್ಯವಿಲ್ಲ. ಈಗಾಗಲೇ ಏರ್‌ ಏಷ್ಯಾ, ಸ್ಟಾರ್‌ ಏರ್‌, ವಿಸ್ತಾರ ಏರ್‌ಲೈನ್ಸ್‌ಗಳು ಟರ್ಮಿನಲ್‌-2ರಿಂದ ಸೇವೆ ನೀಡುತ್ತಿವೆ. ಅದಕ್ಕಾಗಿ ಅಲ್ಲಿಗೆ ಬಂದಿಳಿದ ಪ್ರಯಾಣಿಕರನ್ನು ಟರ್ಮಿನಲ್‌-1ಕ್ಕೆ ಕರೆದುಕೊಂಡು ಹೋಗುವ, ಹೊಸ ಟರ್ಮಿನಲ್‌ ಬಗ್ಗೆ ಮಾಹಿತಿ ಇಲ್ಲದೇ ವಿಮಾನ ನಿಲ್ದಾಣದಿಂದ ವಿಮಾನಯಾನ ಮಾಡಲು ಬಂದ ಪ್ರಯಾಣಿಕರಿಗೆ ಮಾಹಿತಿ ನೀಡಿ, ಬೆಂಗಳೂರಿನಿಂದ ನಿರ್ಗಮಿಸಲು ಟರ್ಮಿನಲ್‌-2ಗೆ ಕರೆದೊಯ್ಯಲು ಶೆಟಲ್‌ ಬಸ್‌ ಸೇವೆಯ ವ್ಯವಸ್ಥೆ ಮಾಡಲಾಗಿದೆ.

ಟರ್ಮಿನಲ್‌-2ರಲ್ಲಿಯೇ ಎಲ್ಲ ರೀತಿಯ ಕ್ಯಾಬ್‌, ವಾಯು ವಜ್ರ ಬಸ್‌ ಸೇವೆ ಸೇರಿದಂತೆ ಟರ್ಮಿನಲ್‌-1ರಲ್ಲಿ ಲಭ್ಯವಿರುವ ಸವಲತ್ತು ನೀಡಿದರೆ ಶೆಟಲ್‌ ಬಸ್‌ ಅಗತ್ಯ ಇರುವುದಿಲ್ಲ. ವಿಮಾನ ನಿಲ್ದಾಣದ ಬಳಕೆಗಾಗಿ ಪ್ರತಿಯೊಬ್ಬ ಪ್ರಯಾಣಿಕರಿಂದ ಟಿಕೆಟ್‌ನಲ್ಲಿ ವಸೂಲಿ ಮಾಡುವ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಸೇವೆ ನೀಡುವಲ್ಲಿ ಟಿ-1 ಹಾಗೂ ಟಿ-2 ನಡುವೆ ತಾರತಮ್ಯ ಮಾಡಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ದೇವನಹಳ್ಳಿಯ ವಿಮಾನ ನಿಲ್ದಾಣದ ಕಂಬಕ್ಕೆ ಡಿಕ್ಕಿ ಹೊಡೆದ ಟಿ1 ಹಾಗೂ ಟಿ2 ನಡುವೆ ಪ್ರಯಾಣಿಕರನ್ನು ಹೊತ್ತು ಸಾಗುವ ಶಟಲ್‌ ಬಸ್‌ 
ದೇವನಹಳ್ಳಿಯ ವಿಮಾನ ನಿಲ್ದಾಣದ ಕಂಬಕ್ಕೆ ಡಿಕ್ಕಿ ಹೊಡೆದ ಟಿ1 ಹಾಗೂ ಟಿ2 ನಡುವೆ ಪ್ರಯಾಣಿಕರನ್ನು ಹೊತ್ತು ಸಾಗುವ ಶಟಲ್‌ ಬಸ್‌ 

ಅಗತ್ಯ ಕ್ರಮದ ಭರವಸೆ

‘ಟರ್ಮಿನಲ್ 2 ರಿಂದ ಟರ್ಮಿನಲ್ 1ಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿದ್ದು ಬಸ್‌ನಲ್ಲಿದ್ದ 17 ಜನರನ್ನು ರಕ್ಷಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಹತ್ತು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆ ಪೈಕಿ ಐವರಿಗೆ ಚಿಕಿತ್ಸೆ ನೀಡಿ  ಮನೆಗೆ ಕಳಿಸಲಾಗಿದೆ. ಇಂಥ ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ವಿಮಾನ ನಿಲ್ದಾಣದ ವಕ್ತಾರರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಮಾನ ನಿಲ್ದಾಣ ಒಳಗೆ ಬಸ್‌ ಮೇಲೆ ನಿಗಾ ಇಡಲಾಗುತ್ತದೆ. ನಿಲ್ದಾಣದ ಹೊರಗೆ ಸಂಚರಿಸುವ ಶಟಲ್‌ ಬಸ್‌ಗಳ ಬಗ್ಗೆ ಯಾರೂ ಅಷ್ಟಾಗಿ ಗಮನ ಹರಿಸುವುದಿಲ್ಲ. ನಿರ್ಲಕ್ಷದಿಂದಾಗಿ ಅಪಘಾತವಾಗಿದೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. 

ಓವರ್‌ ಟೈಮ್‌ ಡ್ಯೂಟಿ

ಚಾಲಕರ ಆರೋಪ ‘ಸಿಬ್ಬಂದಿಯ ಕೊರತೆಯಿಂದಾಗಿ ಲಭ್ಯವಿರುವ ಚಾಲಕರಿಗೆ ಹೆಚ್ಚಿನ ಅವಧಿಯ ಕೆಲಸ (ಓವರ್‌ ಟೈಮ್‌ ಡ್ಯೂಟಿ) ನೀಡಲಾಗುತ್ತಿದೆ. ಹಾಗಾಗಿ ಹೆಚ್ಚಿನ ಚಾಲಕರು ವಿಶ್ರಾಂತಿ ನಿದ್ದೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಕೆಲವು ಚಾಲಕರು ಆರೋಪಿಸಿದ್ದಾರೆ.  ‘ಏರ್‌ ಇಂಡಿಯಾ ಸಾಟ್ಸ್‌’ ಸಂಸ್ಥೆಗೆ ಶಟಲ್‌ ಬಸ್‌ ಸೇವೆ ಒದಗಿಸುವ ಗುತ್ತಿಗೆ ನೀಡಲಾಗಿದೆ. ವೋಲ್ವೊ ಹಾಗೂ ಜೆಬಿಎಂ ಕಂಪನಿಯ ಹವಾನಿಯಂತ್ರಿತ ಬಸ್‌ಗಳನ್ನು ಇದಕ್ಕೆ ನಿಯೋಜಿಸಲಾಗಿದೆ. 24 ತಾಸು ಎರಡೂ ಟರ್ಮಿನಲ್‌ ನಡುವೆ ಉಚಿತ ರೌಂಡ್‌ ಟ್ರಿಪ್‌ ಸೇವೆ ಒದಗಿಸಲಾಗುತ್ತಿದೆ.  ವಿದ್ಯುತ್‌ ಚಾಲಿತ ಬಸ್‌ಗಳಲ್ಲಿ ಹಿಂಬದಿಯಲ್ಲಿ ಬ್ಯಾಟರಿ ಇರುತ್ತದೆ. ಒಂದು ವೇಳೆ ಬಸ್‌ ಮುಂಭಾಗ ಬ್ಯಾಟರಿ ಇದ್ದರೆ ಕಂಬಕ್ಕೆ ಗುದ್ದಿದ ರಭಸಕ್ಕೆ ಬಸ್‌ ಸುಟ್ಟು ಭಸ್ಮವಾಗುವ ಸಾಧ್ಯತೆ ಇತ್ತು ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT