ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೂಡು ಧಾರಣೆ ಇಳಿಮುಖ

ಹಿಪ್ಪುನೇರಳೆ ಕೃಷಿಯಿಂದ ಹಿಂದೆ ಸರಿಯುತ್ತಿರುವ ರೈತರು
Last Updated 22 ಜುಲೈ 2021, 4:24 IST
ಅಕ್ಷರ ಗಾತ್ರ

ವಿಜಯಪುರ: ಯಾವುದೇ ನದಿ, ನಾಲೆಗಳ ಆಸರೆ ಇಲ್ಲದೆ ಅಂತರ್ಜಲವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಬಯಲುಸೀಮೆ ರೈತರು ರೇಷ್ಮೆ ಬೆಳೆ ನಂಬಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಆದರೆ, ಈಚೆಗೆ ಇಳಿಮುಖವಾಗುತ್ತಿರುವ ರೇಷ್ಮೆ ಧಾರಣೆ ಹಾಗೂ ಹವಾಮಾನ ವೈ‍ಪರೀತ್ಯದಿಂದಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಬೀದಿಗೆ ಬರುವಂತಾಗಿದೆ.

ದೇಶಕ್ಕೆ ಹಣ್ಣು, ಹಾಲು, ತರಕಾರಿ ಪೂರೈಕೆ ಮಾಡುತ್ತಿರುವ ಈ ಭಾಗದ ರೈತರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ತರಕಾರಿ, ಹಣ್ಣು ಬೆಳೆಯುವುದು ಕನಸಿನ ಮಾತಾಗಿದೆ. ಅಂತರ್ಜಲ ಮಟ್ಟ 1,600 ಅಡಿಗೆ ಕುಸಿದಿದೆ. ಕುಡಿಯುವ ನೀರು ಸೇರಿದಂತೆ ಕೃಷಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಬೇಕಾಗಿರುವ ಪರಿಸ್ಥಿತಿ ಇದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರು ನಂಬಿಕೊಂಡಿದ್ದ ರೇಷ್ಮೆ ಕೃಷಿಯೂ ಕೈಕೊಟ್ಟಿದೆ.

‘ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ. ಕುಡಿಯಲು ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಸಿ.ಬಿ ರೇಷ್ಮೆ ಗೂಡು ಕೆ.ಜಿಗೆ ₹30, ದ್ವಿತಳಿ ಗೂಡಿಗೆ ₹50 ಸಹಾಯಧನ ನೀಡಲಾಗುತ್ತಿತ್ತು. ಈಗ ಸಹಾಯಧನ ಕೊಡುವುದನ್ನೇ ನಿಲ್ಲಿಸಿದ್ದಾರೆ. ಇಲಾಖೆ ಅಧಿಕಾರಿಗಳು ಯಾರೂ ಕೂಡ ಹೊಣೆಗಾರಿಕೆ ವಹಿಸಿಕೊಳ್ಳುತ್ತಿಲ್ಲ. ಇದರಿಂದ ರೇಷ್ಮೆ ಕೃಷಿ ನಂಬಿದ ರೈತರು ತೊಂದರೆಗೆ ಸಿಲುಕಿದ್ದಾರೆ’ ಎಂದುರೈತ ಸಂಘದ ಮುಖಂಡ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ ಬೇಸರ ವ್ಯಕ್ತಪಡಿಸುತ್ತಾರೆ.

ಒಂದು ಮೂಟೆ ಹಿಪ್ಪುನೇರಳೆ ಸೊಪ್ಪು ₹ 400 ಇದೆ. ಕೆ.ಜಿ ಗೂಡು ಉತ್ಪಾದನೆ ಮಾಡಬೇಕಾದರೆ ಸರಾಸರಿ ₹ 450 ವ್ಯಯ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಗೂಡಿನ ಬೆಲೆ ₹ 250ರಿಂದ 350ಗೆ ಹರಾಜು ಆಗುತ್ತಿದೆ. ನೀರಾವರಿ ಇರುವ ರೈತರು ಹಿಪ್ಪುನೇರಳೆ ಸೊಪ್ಪು ಬೆಳೆದುಕೊಂಡು ಸಾಕಣೆ ಮಾಡುತ್ತಾರೆ. ಆದರೆ, ಸಾಕಷ್ಟು ಮಂದಿ ರೈತರು ಹಿಪ್ಪುನೇರಳೆ ಸೊಪ್ಪು ಖರೀದಿ ಮಾಡಿಕೊಂಡು ಬಂದು ಹುಳು ಸಾಕಣೆ ಮಾಡುತ್ತಿದ್ದಾರೆ.

ಗೂಡಿನ ಬೆಲೆ ಏರಿಕೆಯಾಗುತ್ತಿಲ್ಲ. ಮೋಡ ಮುಸುಕಿದ ವಾತಾವರಣದಿಂದಾಗಿ ನೂಲು ಬಿಚ್ಚಾಣಿಕೆ ಸರಿಯಾಗಿ ಆಗದ ಕಾರಣ ರೀಲರ್‌ಗಳು ಕೂಡ ಸರಿಯಾಗಿ ಬೆಲೆ ನೀಡುತ್ತಿಲ್ಲ. ಇದರಿಂದ ಬಹಷ್ಟು ಮಂದಿ ರೈತರು ಉದ್ಯಮದಿಂದ ಹಿಂದೆ ಸರಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಕನಿಷ್ಠ ₹ 100 ಸಹಾಯಧನ ನೀಡಬೇಕು ಎಂಬುದು ರೈತರ ಆಗ್ರಹ.

‘ರೇಷ್ಮೆ ಹುಳು ಸಾಕಣೆ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಕಷ್ಟಕ್ಕೆ ತಕ್ಕಷ್ಟು ಪ್ರತಿಫಲ ಸಿಗುತ್ತಿಲ್ಲ. ಕುಟುಂಬ ನಿರ್ವಹಣೆ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸುಧಾರಣೆ, ಹುಳು ಸಾಕಣೆ ಮನೆಗಳ ನಿರ್ಮಾಣಕ್ಕೆ ಮಾಡಿರುವ ಸಾಲ ತೀರಿಸಬೇಕಿದೆ’ ಎಂದುಹರಳೂರು ನಾಗೇನಹಳ್ಳಿ ರೈತ ಪಾಪಣ್ಣ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT