ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿಗೆ ಶರಣಾದಾಗ ಮಕ್ತಿ ಲಭ್ಯ: ಎಂ.ಆರ್. ಜಯರಾಮ್‌

Last Updated 25 ಸೆಪ್ಟೆಂಬರ್ 2018, 13:17 IST
ಅಕ್ಷರ ಗಾತ್ರ

ವಿಜಯಪುರ: ‘ವ್ಯಕ್ತಿ ಯಾರೇ ಆಗಿದ್ದರೂ ಹುಟ್ಟಿದ ಮೇಲೆ ತನ್ನನ್ನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ ಅಥವಾ ಶರಣಾಗತನಾಗದಿದ್ದರೆ ಮುಕ್ತಿ ಸಿಗುವುದಿಲ್ಲ’ ಎಂದು ಕೈವಾರ ಧರ್ಮದರ್ಶಿ ಎಂ.ಆರ್. ಜಯರಾಮ್‌ ಹೇಳಿದರು.

ಹೋಬಳಿಯ ಭಟ್ರೇನಹಳ್ಳಿ ಸಾಯಿನಾಥ ಜ್ಞಾನಮಂದಿರದಲ್ಲಿ ಆಯೋಜಿಸಿದ್ದ ಶಿರಡಿ ಸಾಯಿಬಾಬಾ ಸಮಾಧಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಸಾಕಷ್ಟು ಮಂದಿ ಅವಧೂತರಿದ್ದಾರೆ. ಅವರೆಲ್ಲರನ್ನು ಅನುಸರಿಸಲು ಆಗದಿದ್ದರೂ, ಕೆಲವರ ಧ್ಯೇಯ ಹಾಗೂ ತತ್ವಗಳನ್ನು ಪಾಲಿಸಿದರೆ ಒಳಿತಾಗುತ್ತದೆ ಎಂದು ಹೇಳಿದರು.

ಜೀವನದಲ್ಲಿ ಏಳಿಗೆ ಕಷ್ಟ. ಈ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು. ಅದನ್ನೇ ಬೋಧಿಸುತ್ತಿದ್ದರು. ದುರ್ಗುಣಗಳಿಗೆ ವಿಮುಖರಾಗಿ ಆತ್ಮ ಸಾಕ್ಷಾತ್ಕಾರಕ್ಕೆ ಮುಂದಾಗಿ ಎಂಬ ಸಾಯಿಬಾಬಾ ಅವರ ಆದೇಶ ಬದುಕಿಗೆ ಉತ್ತಮ ಮಾರ್ಗ ದರ್ಶನವಾಗಿದೆ ಎಂದರು.

‘ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು. ನಾವೀಗ ಅವನ್ನು ಪಾಲಿಸಿದರೆ ಸತ್ಪ್ರಜೆಗಳಾಗುತ್ತೇವೆ, ಸಮಾಜವೂ ಏಳಿಗೆಯಾಗುತ್ತದೆ’ ಎಂದರು.

ಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು ‘ಮನುಷ್ಯ’ ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗೂ ಜಾತ್ಯತೀತ ಎಂದರು.

ಬೆಂಗಳೂರಿನ ಸೃಷ್ಟಿ ಆರ್ಟ್‌ ಫೌಂಡೇಷನ್‌ನ ವೇದಾ ದೀಕ್ಷಿತ್‌ ವೆಲ್ಲಾಬ್‌ ಅವರ ಶಿಷ್ಯರು ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು.

ದೇವಾಲಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸೇವಾಕರ್ತರಾದ ಮೇಲೂರು ಎಚ್.ವಿ.ರಾಮಕೃಷ್ಣಪ್ಪ, ಕೆ. ಸೀತಾರಾಮರೆಡ್ಡಿ, ಎಂ.ಎನ್‌.ಗೋಪಾಲಪ್ಪ, ವೀಣಾದೇವಿ, ರತ್ನಮ್ಮ, ಪ್ರಮೀಳಾ, ದಿನದ ಪೂಜಾ ಸೇವಾಕರ್ತರಾದ ಎಸ್‌.ಎನ್‌.ಸುರೇಶ್‌, ನಾಗರತ್ನ, ಸನತ್‌ ಶ್ರೀನಾಥ್‌, ನಾಗಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT