ಬುಧವಾರ, ಡಿಸೆಂಬರ್ 8, 2021
27 °C
ದೊಡ್ಡ ಹುಲ್ಲೂರು: ಸೊಣ್ಣದೇನಹಳ್ಳಿಯಲ್ಲಿ ಶಾಸಕ ಶರತ್‌ ಬಚ್ಚೇಗೌಡ ಹೇಳಿಕೆ

ಗ್ರಾ.ಪಂ.ಗೆ ಸೋಲಾರ್‌ ಜೋಡಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ಲಿನ ಹೊರೆಯನ್ನು ತಗ್ಗಿಸಲು ಗ್ರಾಮಗಳಿಗೆ ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಅವರು ತಾಲ್ಲೂಕಿನ ದೊಡ್ಡ ಹುಲ್ಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸೊಣ್ಣದೇನಹಳ್ಳಿಯಲ್ಲಿ ಆಯುಷ್ಮಾನ್ ಕಾರ್ಡ್‌ ವಿತರಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿಗಳಿಗೆ ಬರುವ ಹಣದಲ್ಲಿ ಹೆಚ್ಚಿನ ಹಣವನ್ನು ಗ್ರಾಮಗಳ ಬೀದಿ ದೀಪಗಳಿಗೆ ಹಾಗೂ ಪಂಪ್‌ಗಳಿಗೆ ಕೊಡಬೇಕಾಗಿರುವುದರಿಂದ ಗ್ರಾಮಗಳ ಉಳಿಕೆ ಅಭಿವೃದ್ಧಿ ಕೆಲಸ ಮಾಡಲು ಅನನುಕೂಲವಾಗುತ್ತದೆ. ಆದ್ದರಿಂದ ಸೋಲಾರ್‌ ದೀಪ ಅಳವಡಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ’ ಎಂದರು.

‘ಈಗ ಗ್ರಾಮದ ಎಲ್ಲಾ ದೀಪಗಳಿಗೆ ಒಂದೆಡೆ ಪ್ಯಾನಲ್‌ಗಳನ್ನು ಜೋಡಿಸಿ ಅದರಿಂದ ಎಲ್ಲಾ ದೀಪಗಳು ಉರಿಯುವಂತೆ ಮಾಡಬಹುದಾದ್ದರಿಂದ ಪ್ರತಿ ಕಂಬಕ್ಕೆ ಪ್ಯಾನಲ್ ಜೋಡಿಸಲು ಸಮಸ್ಯೆ ಇಲ್ಲ’ ಎಂದರು.

ಮುಂದಿನ ದಿನಗಳಲ್ಲಿ ಸೊಣ್ಣದೇನಹಳ್ಳಿಯನ್ನು ಸೋಲಾರ್‌ ಗ್ರಾಮವನ್ನಾಗಿಸುವುದಾಗಿ ತಿಳಿಸಿದರು.

‘ಪ್ರಧಾನಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಸೊಣ್ಣದೇನಹಳ್ಳಿಯನ್ನು ಅರಸಿಕೊಂಡಿದ್ದು ಸುಮಾರು ₹51 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತದೆ’ ಎಂದರು.

‘ಗ್ರಾಮದಲ್ಲಿ ಈಗಾಗಲೇ ಗುರುತಿಸಿರುವ 5 ಎಕರೆ ಜಮೀನಿನಲ್ಲಿ ಗ್ರಾಮದ ವಸತಿ ರಹಿತರಿಗೆ ನಿವೇಶನಗಳನ್ನು ನೀಡಲಾಗುತ್ತದೆ’ ಎಂದರು.

‘ಊರಿನಲ್ಲಿ ಈಗಾಗಲೇ ಹೆಚ್ಚಿನ ಜನರು ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದು ಉಳಿಕೆಯಿರುವವರಿಗೆ ಈ ದಿನ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದು ಅದನ್ನು ಆರೋಗ್ಯದ ಸಮಸ್ಯೆ ಬಂದಾಗ ಸದುಪಯೋಗಪಡಿಸಿಕೊಳ್ಳಬಹುದು’ ಎಂದರು.

‘ಇದರಲ್ಲಿ ₹ 5 ಲಕ್ಷವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು’ ಎಂದರು.

ಬೆಂಗಳೂರು ಹಾಲಿನ ಡೈರಿಯ ಮಾಜಿ ಅಧ್ಯಕ್ಷ ಹುಲ್ಲೂರು ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣ ಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ಮುಖಂಡರಾದ ಶ್ರೀನಿವಾಸ್, ಗಣೇಶ್, ಎಲ್ ಅಂಡ್ ಟಿ ಮಂಜುನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.