ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್‌: ಬೀದಿಬದಿ ಮಳಿಗೆ ತೆರವಿಗೆ ಸಿಐಟಿ ಆಕ್ಷೇಪ

ತೆರವು ಕಾರ್ಯಾಚರಣೆ ಸ್ಥಗಿತಕ್ಕೆ ಒತ್ತಾಯಿಸಿ ಪ್ರತಿಭಟನೆ
Published 13 ಫೆಬ್ರುವರಿ 2024, 15:08 IST
Last Updated 13 ಫೆಬ್ರುವರಿ 2024, 15:08 IST
ಅಕ್ಷರ ಗಾತ್ರ

ಆನೇಕಲ್ : ಬೀದಿಬದಿ ವ್ಯಾಪಾರಿಗಳ ಮಳಿಗೆಗಳನ್ನು ಅಕ್ರಮವಾಗಿ ತೆರವುಗೊಳಿಸುವುದನ್ನು ನಿಲ್ಲಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ತಾಲ್ಲೂಕಿನ ಚಂದಾಪುರ ಪುರಸಭೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ಎನ್‌.ಮಂಜುನಾಥ್‌ ಮಾತನಾಡಿ, ಬಡ ಕುಟುಂಬಗಳಾಗಿರುವ ಬೀದಿಬದಿ ವ್ಯಾಪಾರಿಗಳು ಒಂದು ಹೊತ್ತಿನ ಊಟಕ್ಕಾಗಿ ಬೆಳಗಿನಿಂದ ಸಂಜೆಯವರೆಗೂ ದುಡಿಯಬೇಕು. ಏಕಾಏಕಿ ರಸ್ತೆಯ ಬದಿಯ ಅಂಗಡಿಗಳನ್ನು ತೆರವುಗೊಳಿಸುವುದರಿಂದ ಅವರ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಅವರು ಪರ್ಯಾಯ ವ್ಯವಸ್ಥೆ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಪಿ.ಸುನೀಲ್‌ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ಮತ್ತು ವ್ಯಾಪಾರದ ಪರವಾನಗಿ ನೀಡಬೇಕು. ಇವರಿಗೆ ಅವಶ್ಯಕವಿರುವ ಕುಡಿಯುವ ನೀರು, ಶೌಚಾಲಯ, ಅಂಗಡಿಗಳಿಗೆ ಆಶ್ರಯದ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಗೂ ಆತ್ಮ ನಿರ್ಭರ ಯೋಜನೆಯಡಿ ಸಾಲ ನೀಡಬೇಕು. ಕೇಂದ್ರ ಸರ್ಕಾರ ಬೀದಿಬದಿ ವ್ಯಾಪಾರಿಗಳ ಜೀವನಾಧಾರ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಪಿ.ಸುರೇಶ್‌, ಮುಖಂಡರಾದ ರುಕ್ಕಮ್ಮ, ಜ್ಯೋತಿ, ಲಕ್ಷ್ಮಮ್ಮ, ಸಾಧಿಕ್ ಅಲಿ, ಆನಂದ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT