ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಬೇಡಿಕೆ ಈಡೇರಿಕೆ ಪಾದಯಾತ್ರೆಗೆ ಬೆಂಬಲ: ಸಿದ್ದರಾಮಯ್ಯ

ನೇಕಾರರ ಸಂಘಟನೆಗಳ ಒಕ್ಕೂಟ ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ
Last Updated 29 ನವೆಂಬರ್ 2020, 1:26 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನೇಕಾರರ ಸಮಸ್ಯೆಗಳ ಕುರಿತಂತೆ ಚರ್ಚಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಅವರು ನಗರದ ಕೆ.ಎಂ.ಎಚ್‌.ಕಲ್ಯಾಣ ಮಂದಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ನೇಕಾರರ ಸಂಘಟನೆಗಳ ಒಕ್ಕೂಟ, ನೇಕಾರರ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ, ಕಲ್ಪತರು ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘ, ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಕೂಲಿ ಕಾರ್ಮಿಕರ ಸಂಘದ ಸಹಯೋಗದಲ್ಲಿ ನಡೆದ ಚಿಂತನಾ ಸಭೆಯಲ್ಲಿ ಮಾತನಾಡಿದರು.

ನೇಕಾರರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯಲ್ಲಿ ಭಾಗವಹಿಸಲಾಗುವುದು. ರಾಜ್ಯದಲ್ಲಿ 14ಲಕ್ಷ ಜನ ನೇಕಾರಿಕೆ ಅವಲಂಬಿಸಿದ್ದಾರೆ ಎಂದರು.

’ಮೋದಿ ಮೋದಿ ಎಂದು ಕೂಗುತ್ತಾ ಅವರು ಹೇಳುವ ಎಲ್ಲ ಸುಳ್ಳುಗಳಿಗೂ ಚಪ್ಪಾಳೆ ತಟ್ಟುವ ಮುನ್ನ ಒಮ್ಮೆ ಯೋಚಿಸಿ. ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಎನ್ನುವ ಪದವೇ ಅರ್ಥ ಕಳೆದುಕೊಂಡಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ಬಡವರಿಗೂ 10ಕೆ.ಜಿ.ಅಕ್ಕಿ ಉಚಿತವಾಗಿ ನೀಡಲಾಗುವುದು. ಸ್ವಾತಂತ್ರ್ಯ ಭಾರತದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎನ್ನುವುದೇ ನನ್ನ ಮುಖ್ಯ ಧ್ಯೇಯ‘ ಎಂದರು.

ದೇಶದಲ್ಲಿ ನೋಟ್‌ ಬ್ಯಾನ್‌ ಮಾಡಿದ ನಂತರ ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆಗಳು ನಶಿಸುತ್ತಿವೆ. ದೇಶದಲ್ಲಿಅತ್ಯಂತ ಕೆಟ್ಟ ಆರ್ಥಿಕ ನೀತಿ ಇದೆ. ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಾಗಿದೆ. ದೇಶದಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ. ಎಲ್ಲರ ಖಾತೆಗಳಿಗೆ ₹15 ಸಾವಿರ ಜಮಾ ಮಾಡುತ್ತೇವೆ ಎಂದು ಹೇಳಿದವರು ಈಗ ಎಲ್ಲಿ ಹೋದರು’ ಎಂದು ಪ್ರಶ್ನಿಸಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವಧಿಯಲ್ಲಿ ತಾಲ್ಲೂಕಿಗೆ ₹6.15 ಕೋಟಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೊಡಿಸಲಾಗಿತ್ತು. ಆದರೆ, 2018ರ ನಂತರ ಇದುವರೆಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಯಾರೊಬ್ಬರಿಗೂ ಹಣ ಬಂದಿಲ್ಲ. ನೇಕಾರರ ಮನೆ ನಿರ್ಮಾಣಕ್ಕೂ ಹಣ ನೀಡಿಲ್ಲ ಎಂದರು.

ಸಭೆಯಲ್ಲಿ ನೇಕಾರರ ಬೇಡಿಕೆಗಳ ಪಟ್ಟಿ ಸಲ್ಲಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್‌, ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜ್‌, ನೇಕಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪಿ.ಎ.ವೆಂಕಟೇಶ್‌, ನೇಕಾರರ ಮಹಾಮಂಡಳಿ ಅಧ್ಯಕ್ಷ ಪಿ.ಸಿ.ವೆಂಕಟೇಶ್‌, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್‌, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ನಾಯ್ಕ್‌, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ, ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್‌.ಪ್ರಭುದೇವ್‌, ಟಿಎಪಿಎಂಸಿಎಸ್‌ ಅಧ್ಯಕ್ಷ ಡಿ.ಸಿದ್ದರಾಮಯ್ಯ, ನೇಕಾರರ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್‌, ಮುಖಂಡರಾದ ಜೆ.ರಾಜೇಂದ್ರ, ಕೆ.ಪಿ.ಜಗನ್ನಾಥ್‌, ಎಸ್‌.ದಯಾನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT