ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಹೋರಾಟಕ್ಕೆ ಸ್ವಾಮೀಜಿ ಬೆಂಬಲ, ಕಸ ವಿಲೇವಾರಿ ಲಾರಿ ಸ್ಥಗಿತಕ್ಕೆ ಆಗ್ರಹ

3ನೇ ದಿನಕ್ಕೆ ಕಾಲಿಟ್ಟ ಚಿಗರೇನಹಳ್ಳಿ ಗ್ರಾಮಸ್ಥರ ಹೋರಾಟ
Last Updated 28 ನವೆಂಬರ್ 2021, 4:54 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರ ಗ್ರಾಮಸ್ಥರಿಗೆ ನೀಡಿದ್ದ ಎಲ್ಲಾ ಭರವಸೆ ಮರೆತು ಕಣ್ಣು, ಕಿವಿ ಇಲ್ಲದಂತೆ ನಡೆದುಕೊಂಡಿರುವ ಪರಿಣಾಮವೇ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಹೀಗಾಗಿ ಬಿಬಿಎಂಪಿ ಕಸ ಇಲ್ಲಿಗೆ ಬರುವುದನ್ನು ನಿಲ್ಲಿಸುವಂತೆ ರೈತರು ನಡೆಸುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಾಗಿದೆ ಎಂದು ಪಟ್ಟನಾಯಕನಹಳ್ಳಿ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಹಾಕುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ನಡೆಯದೇ ಇದ್ದ ಕಾರಣದಿಂದಾಗಿ ಎರಡು ವರ್ಷಗಳಿಂದಲೂ ಗ್ರಾಮಸ್ಥರು ಇಲ್ಲಿಗೆ ಕಸ ಬಾರದಂತೆ ತಡೆದು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ವೈಜ್ಞಾನಿಕ ಕಸ ವಿಲೇವಾರಿಗೆ ಹಲವಾರು ಅವಕಾಶ ನೀಡಿದ್ದರೂ ಉಪಯೋಗವಾಗಿಲ್ಲ ಎಂದು ದೂರಿದರು.

ಗ್ರಾಮಸ್ಥರು ಅಂತಿಮವಾಗಿ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಿರುವುದು ಸ್ವಾಗತಾರ್ಹ. ಕಸ ಕಂಟಕ ಸಮಸ್ಯೆ ಬಗೆಹರಿಯುವವರೆಗೂ ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಒಮ್ಮತದಿಂದ ಶಾಂತಿಯುತವಾಗಿ ಹೋರಾಟ ಮುನ್ನಡೆಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

ಪ್ರತಿಜ್ಞೆ: ನಂಜಾವಧೂತ ಸ್ವಾಮೀಜಿ ಸಮ್ಮುಖದಲ್ಲಿ ಧರಣಿ ನಿರತ ಗ್ರಾಮಸ್ಥರು ಪ್ರತಿಜ್ಞೆ ಮಾಡುವ ಮೂಲಕ ಕಸದ ಲಾರಿಗಳು ಇಲ್ಲಿಗೆ ಬರುವುದನ್ನು ನಿಲ್ಲಿಸುವವರೆಗೂ ಯಾವುದೇ ಕಾರಣಕ್ಕೂ ಧರಣಿಯಿಂದ ಹಿಂದಕ್ಕೆ ಸರಿಯುವುದಿಲ್ಲ ಎನ್ನುವ ಪ್ರತಿಜ್ಞೆ
ಮಾಡಿದರು.

ಡಿಸಿ ಹಿಂಜರಿಕೆ: ಬಿಬಿಎಂಪಿ ಕಸ ಕಂಟಕದ ವಿರುದ್ಧ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಸ್ಥರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಎರಡು ದಿನಗಳಿಂದ ಭೇಟಿ ನೀಡಿ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಶನಿವಾರ ಈ ಕಡೆಗೆ ಬರಲೇ ಇಲ್ಲ.

ಧರಣಿ ನಿರತರು ಕಸದ ಲಾರಿಗಳು ಇಲ್ಲಿಗೆ ಬರುವುದನ್ನು ನಿಲ್ಲಸದ ಹೊರತು ಯಾವುದೇ ರೀತಿಯ ಮಾತುಕತೆಗೆ ನಾವು ಸಿದ್ಧರಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಕಸದ ಲಾರಿಗಳು ಇಲ್ಲಿಗೆ ಬಾರದಂತೆ ತಡೆಯುವ ಅಧಿಕಾರ ತಮಗಿಲ್ಲ ಎಂದು ಜಿಲ್ಲಾಧಿಕಾರಿ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT