ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಬದಿ ಅರಳಿದ ಸ್ವರ್ಣಪುಷ್ಪ

Last Updated 8 ಮೇ 2019, 13:07 IST
ಅಕ್ಷರ ಗಾತ್ರ

ವಿಜಯಪುರ: ತಾಲ್ಲೂಕಿನ ಕೆಲ ಭಾಗಗಳಲ್ಲಿ ಇತ್ತೀಚೆಗೆ ಬಿದ್ದ ಮಳೆರಾಯ ಕಕ್ಕೆ ಹೂವನ್ನು ಅರಳಿಸಿದ್ದಾನೆ. ಅಲ್ಲಲ್ಲಿ ಬೆಳೆದ ಕಕ್ಕೆ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ. ಕಾಡು ಹೂವಿನ ಸೊಬಗು ಮತ್ತು ಘಮಲು ಎಲ್ಲೆಡೆ ಆವರಿಸಿದೆ. ವಿಜಯಪುರದಿಂದ ದೇವನಹಳ್ಳಿಗೆ ಸಂಚರಿಸುವ ರಸ್ತೆಯ ಇಕ್ಕೆಲಗಳಲ್ಲಿ ಪ್ರಯಾಣಿಕರಲ್ಲಿ ಮಂದಹಾಸ ಮೂಡಿಸುತ್ತಿದೆ.

ಗೊಂಚಲು ಗೊಂಚಲಾಗಿ ಬಿಡುವ ಕಕ್ಕೆಯ ಸೊಬಗು ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳಿನಲ್ಲಿ ಕಂಡು ಬರುತ್ತದೆ.

ಕಕ್ಕೆಯನ್ನು ಸ್ವರ್ಣಪುಷ್ಪ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ ಗೋಲ್ಡನ್ ಶವರ್ ಟ್ರೀ ಎಂದು ಕರೆಯುತ್ತಾರೆ. ಇದು ಥಾಯ್‌ಲ್ಯಾಂಡ್‌ ದೇಶದ ರಾಷ್ಟ್ರೀಯ ಪುಷ್ಪ ಮತ್ತು ಕೇರಳದ ರಾಜ್ಯ ಪುಷ್ಪ. ಇದು ಶಿವನಿಗೆ ತುಂಬಾ ಪ್ರಿಯವಾದ ಹೂವೆನ್ನುತ್ತಾರೆ ಹಿರಿಯ ಸೋಮಶೇಖರ್ ಹೇಳುತ್ತಾರೆ.

ಕಕ್ಕೆ ಮರ ಎಲ್ಲ ಕಡೆ ಬೆಳೆಯುತ್ತದೆ. ಹಿಂದೆ ಎಲ್ಲೆಲ್ಲೂ ಈ ಮರಗಳು ಕಾಣಿಸುತ್ತಿದ್ದವು. ಕಾಲದ ಬದಲಾವಣೆಗೆ ಸಿಕ್ಕಿ ಅವು ಕೊಡಲಿಗೆ ಆಹುತಿಯಾದವು. ಆದರೂ ಈಗ ಸರ್ಕಾರಿ ಜಮೀನು, ಅರಣ್ಯ ಪ್ರದೇಶಗಳು, ರಸ್ತೆಯ ಇಕ್ಕೆಲಗಳಲ್ಲಿ ಈ ಮರಗಳನ್ನು ಕಾಣಲು ಸಾಧ್ಯ.
ಸುಂದರ ಆಭರಣದಂತೆ ಕಾಣುವ ಹೂ ಗೊಂಚಲುಗಳು ಕಣ್ಸೆಳೆಯುತ್ತವೆ. ಕಕ್ಕೆ ಮರ ತನ್ನ ಹೂವಿನ ವಾಸನೆಯಿಂದಲೇ ತನ್ನ ಇರುವಿಕೆಯನ್ನು ಸಾರುತ್ತದೆ.

ಕಕ್ಕೆ ಒಂದು ಗಿಡಮೂಲಿಕೆ ಸಸ್ಯವೂ ಹೌದು. ದನಕರುಗಳಿಗೆ ಕಾಲು ಬಾಯಿ ಜ್ವರಕ್ಕೆ ರೈತರು ಕಕ್ಕೆ ಎಲೆಯನ್ನು ತಂದು ಕೆಂಡದ ಮೇಲೆ ಹಾಕಿ ಹೊಗೆ ಹಾಕುತ್ತಾರೆ. ಕೆಲವು ಕಾಯಿಲೆಗಳಿಗೆ ಅದರ ತೊಗಟೆಯನ್ನು ಬಳಸುತ್ತಾರೆ. ಅದರ ಉದ್ದನೆಯ ಕಾಯಿಗಳು ನೋಡಲು ಸುಂದರವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT