ಗುರುವಾರ , ಜುಲೈ 29, 2021
27 °C
ಮಕ್ಕಳ ತಜ್ಞರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಶಾಸಕ ಚಾಲನೆ

‘ಸೋಂಕು ತಡೆಗೆ ಮುಂಜಾಗ್ರತೆ ವಹಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ತಾಲ್ಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಡಿಮೆಯಾಗಿವೆ ಎಂದರೆ ಕೊರೊನಾ ಮುಗಿದು ಹೋಗಿದೆ ಎಂದಲ್ಲ. ಎರಡನೇ ಅಲೆಯಲ್ಲಿ ಸೋಂಕು ಹೆಚ್ಚಾಗಲು ನಾವು ಎಚ್ಚರತಪ್ಪಿದ್ದೇ ಕಾರಣವಾಗಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ‘ಮಕ್ಕಳ ತಜ್ಞರ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಮೂರು ವಾರಗಳಿಂದ ತಾಲ್ಲೂಕಿನಲ್ಲಿ ಸೋಂಕಿತರು ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗುತ್ತಿಲ್ಲ. ವೈದ್ಯರೇ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಸೋಂಕಿತರನ್ನು ಗುರ್ತಿಸಿ ಚಿಕಿತ್ಸೆ ನೀಡಿದ್ದಾರೆ. ಇದರ ಪರಿಣಾಮ ತಾಲ್ಲೂಕಿನಲ್ಲಿ ಈಗ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ವೈದಕೀಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಶಾಲಾ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯ ಪರಿಶ್ರಮವೇ ಕಾರಣ ಎಂದರು.

ಈಗ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಈ ಅಲೆಯಲ್ಲಿ ಮಕ್ಕಳಿಗೆ ಸಮಸ್ಯೆಯಾಗಬಾರದು ಎಂದು ಜಿಲ್ಲಾಡಳಿತ ಪ್ರತಿ ಗ್ರಾಮದಲ್ಲಿರುವ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರದ ಕಿಟ್ ನೀಡುವ ಯೋಜನೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ದೇಶದಲ್ಲಿ ಅಪೌಷ್ಟಿಕತೆ ಎನ್ನುವುದು ಕಣ್ಣಿಗೆ ಕಾಣದ ಹಸಿವಿನ ರೀತಿಯಲ್ಲಿದೆ. ಇದರಿಂದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಅವರ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಅಪೌಷ್ಟಿಕ ಮಕ್ಕಳ ಪಟ್ಟಿಯು ಎಲ್ಲಾ ಅಂಗನವಾಡಿಗಳಲ್ಲಿ ಲಭ್ಯವಿದೆ. ಅವರಿಗೆ ವಿಟಮಿನ್, ಪ್ರೋಟಿನ್‌ಯುಕ್ತ ಆಹಾರ ನೀಡಬೇಕಾಗುತ್ತದೆ ಎಂದರು.

ಎರಡನೇ ಅಲೆಯನ್ನು ಯಶಸ್ವಿಯಾಗಿ ತಡೆಗಟ್ಟಿರುವ ಸಿಬ್ಬಂದಿಯು ಮೂರನೇ ಅಲೆ ತಡೆಗಟ್ಟಲು ಸಿದ್ಧರಾಗಬೇಕು. ಗ್ರಾಮಗಳಲ್ಲಿರುವ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಬಾದಾಮಿ ಹಾಲು, ಬಿಸ್ಕೆಟ್ ಸೇರಿದಂತೆ ಇತರೇ ಪೌಷ್ಟಿಕ ಆಹಾರ ಹೊಂದಿರುವ ಕಿಟ್ ವಿತರಿಸಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಗೀತಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಉಮೇಶ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಕ ಗುರುರಾಜ್ ಹಾಗೂ ಎಂವಿಜೆ ಕಾಲೇಜಿನ ವೈದ್ಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.