ಬುಧವಾರ, ಫೆಬ್ರವರಿ 26, 2020
19 °C
ದಲಿತರ ದಿನ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸುಬ್ರಮಣಿ ಮನವಿ

ಸಮಸ್ಯೆ ಪರಿಹಾರಕ್ಕೆ ಸ್ಥಳೀಯರ ಸಹಕಾರ ಅಗತ್ಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ದಲಿತರ ಕುಂದು ಕೊರತೆಗಳ ಸಮಸ್ಯೆಗಳ ಕಾನೂನುನಾತ್ಮಕ ಪರಿಹಾರಕ್ಕೆ ಸ್ಥಳೀಯರು ಸಹಕಾರ ನೀಡಬೇಕು’ ಎಂದು ಸಹಾಯಕ ಪೊಲೀಸ್ ಆಯುಕ್ತ ಸುಬ್ರಮಣಿ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ನಗರ ಪೊಲೀಸ್ ಈಶಾನ್ಯ ವಿಭಾಗ ದೇವನಹಳ್ಳಿ ಉಪವಿಭಾಗದ ವತಿಯಿಂದ ನಡೆದ ದಲಿತರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಪಡೆದು ಏಳು ದಶಕ ಕಳೆದರೂ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರ ನಿಂತಿಲ್ಲ. ಹಾಗಾಗಿ ದಲಿತರಿಗೆ ಕನಿಷ್ಠ ಎರಡು ತಿಂಗಳಿಗೊಮ್ಮೆ ಕುಂದು ಕೊರತೆ ಸಭೆ ನಡೆಸಲು ಇಲಾಖೆ ಮುಂದಾಗಿದೆ. ಇದನ್ನು ಸಮುದಾಯ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕುಡಿದ ಅಮಲಿನಲ್ಲಿ ಶಾಂತಿ ಭಂಗ ಮಾಡುವುದು, ಯುವತಿಯರನ್ನು ಚುಡಾಯಿಸುವುದು ಮಾಡಬಾರದು. ದರೋಡೆ, ಕಳ್ಳತನ, ದೌರ್ಜನ್ಯಕ್ಕೆ ಕಳೆದ ಆರು ತಿಂಗಳಿಂದ ಕಡಿವಾಣ ಬಿದ್ದಿದೆ’ ಎಂದು ಹೇಳಿದರು.

‘ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿದ ನಂತರ, ಆರೋಪಿಗಳು ಮತ್ತೆ ದಲಿತರ ವಿರುದ್ಧ ದೂರು ನೀಡಿದಾಗ ಸತ್ಯಾಸತ್ಯತೆಯಿಂದ ಪರಿಶೀಲಿಸಿ ಅಗತ್ಯವಿದ್ದರೆ ಪ್ರಕರಣ ದಾಖಲಿಸಿಬೇಕು ಎಂಬುದು ಇಲಾಖೆ ಕಾನೂನು. ಸುಳ್ಳು ಆರೋಪ ಎಂದು ಕಂಡು ಬಂದಲ್ಲಿ ಬಿ ರೀಪೊರ್ಟ್ ಹಾಕಬೇಕಾಗುತ್ತದೆ. ದಲಿತರು ಘಟನೆಗಳ ವಾಸ್ತವವನ್ನು ದೂರಿನಲ್ಲಿ ದಾಖಲಿಸಬೇಕು’ ಎಂದರು.

‘ಸಾರ್ವಜನಿಕ ಸಮಸ್ಯೆಗಳಿದ್ದರೆ ನೇರವಾಗಿ ಠಾಣೆಗೆ ಬಂದು ಹೇಳಿದರೆ ಸಾಕು. ಅಂತಹವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಯಾವುದೇ ಸಂದರ್ಭದಲ್ಲಿ ಠಾಣೆಗೆ ಬರಲು ಮುಕ್ತ ಅವಕಾಶವಿದೆ. ಭಯ ಪಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

‘ಕೆಲ ಮುಖಂಡರು ಭೂವನಹಳ್ಳಿ ಬಳಿ ರಸ್ತೆಗೆ ಫ್ಲೈಓವರ್ ನಿರ್ಮಾಣ ಮಾಡಬೇಕು, ಸಂಚಾರ ಸಮಸ್ಯೆ ಹೆಚ್ಚುತ್ತಿದೆ, ರಸ್ತೆಯಲ್ಲೆ ವ್ಯಾಪಾರ ವಾಹಿವಾಟು ನಡೆದಿದೆ, ಟೋಲ್ ಗೇಟ್ ಬಳಿ ಸರ್ವಿಸ್ ರಸ್ತೆಯಾಗಿಲ್ಲ, ಪಿ.ಟಿ.ಸಿ.ಎಲ್ ಪ್ರಕರಣದಂತಹ ಸಮಸ್ಯೆ ಹೇಳಿಕೊಂಡಿದ್ದಾರೆ. ನಾವು ನಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಇತರ ಇಲಾಖೆಗೆ ಸಮಸ್ಯೆಯನ್ನು ಲಿಖಿತವಾಗಿ ಕಳುಹಿಸಬಹುದು ಅಷ್ಟೆ’ ಎಂದರು.

‘ವಿಮಾನ ನಿಲ್ದಾಣ ಆರಂಭಗೊಂಡ ನಂತರ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಮನೆ ಮಾಲೀಕರರು ಸಂಪೂರ್ಣ ಮಾಹಿತಿ ಪಡೆದು ಮನೆ ಬಾಡಿಗೆ ನೀಡಬೇಕು. ಅನುಮಾನಾಸ್ಪದವಾಗಿ ಕಂಡು ಬರುವ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ದೇವನಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಿದ್ದರಾಜು, ದಲಿತ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು