ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಪೌರ ಕಾರ್ಮಿಕರಿಗೆ ಸಿಗದ ‘ಗೃಹಭಾಗ್ಯ’

ಭೂಮಿ ಮಂಜೂರುಗೊಂಡರೂ ಆಗದ ಹಂಚಿಕೆ । ನನಸಾಗದ ಸ್ವಂತ ಗೂಡಿನ ಕನಸು । ಶಿಥಿಲಗೊಂಡ, ಬಾಡಿಗೆ ಮನೆಯಲ್ಲೇ ವಾಸ
Published 19 ಫೆಬ್ರುವರಿ 2024, 4:10 IST
Last Updated 19 ಫೆಬ್ರುವರಿ 2024, 4:10 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪೌರಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಭಾಗ್ಯ ಯೋಜನೆಯಡಿ ತಮಗೊಂದು ಗೂಡು ಕಟ್ಟಿಕೊಳ್ಳಬೇಕೆಂಬ ಪೌರಕಾರ್ಮಿಕರ ಕನಸು ನನಸಾಗಿಯೇ ಉಳಿದಿದೆ.

ವಿಜಯಪುರ ಪುರಸಭೆಯಲ್ಲಿ ಒಟ್ಟು 68 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು,  42 ಕಾಯಂ ಪೌರಕಾರ್ಮಿಕರು ಇದ್ದಾರೆ. ಇದರಲ್ಲಿ ಬಹುತೇಕರು ಶಿಥಿಲಾವಸ್ಥೆ ಮನೆಗಳಲ್ಲಿ ವಾಸವಾಗಿದ್ದಾರೆ. ಇನ್ನು ಕೆಲವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ತಾವು ದುಡಿಯುವ ವೇತನದಲ್ಲಿ ಬಾಡಿಗೆ ಕಟ್ಟಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ.

ಗೃಹಭಾಗ್ಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸಲು ಭೂಮಿ ಮಂಜೂರಿಗೆ ಪುರಸಭೆ ಸಲ್ಲಿಸಿದ್ದ ಪ್ರಸ್ತಾವನೆ ಫಲವಾಗಿ ಕಂದಾಯ ಇಲಾಖೆಯಿಂದ ಹೋಬಳಿಯ ದೊಡ್ಡತತ್ತಮಂಗಲ ಗ್ರಾಮದ ಸರ್ವೆ ನಂ. 157ರಲ್ಲಿ  ಎರಡು ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಪಹಣಿಯಲ್ಲೂ ನಮೂದಾಗಿದೆ. ಆದರೆ, ಇದುವರೆಗೂ ಸರ್ವೆ ನಡೆಸಿ, ಮಂಜೂರು ಮಾಡಿಕೊಟ್ಟಿರುವ ಭೂಮಿ ಎಲ್ಲಿದೆ ಎಂದು ಭೂ ಮಾಪನ ಇಲಾಖೆಯವರು ಗುರುತಿಸಿಲ್ಲ. ಹೀಗಾಗಿ ಪೌರಕಾರ್ಮಿಕರ ವಸತಿ ಸೌಕರ್ಯ ದೂರವೇ ಉಳಿದಿದೆ.

ಭೂಮಿ ಮಂಜೂರು ಮಾಡಿಕೊಟ್ಟಾಗಿನಿಂದ ಸರ್ವೆ ಮಾಡಿಕೊಡುವಂತೆ ಪುರಸಭೆ ಅಧಿಕಾರಿಗಳು ಭೂಮಾಪನ ಇಲಾಖೆಗೆ ಪತ್ರ ಬರೆದು ಬೇಸತ್ತಿದ್ದಾರೆ. ಇಲಾಖೆಗೆ ಕಡತ ಹಿಡಿದು ಅಲೆದರೂ ಭೂಮಿ ಗುರುತಿಸಿಕೊಟ್ಟಿಲ್ಲ.

ಪೌರಕಾರ್ಮಿಕರಿಗೆ ಸೂಕ್ತವಾದ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಪೌರಕಾರ್ಮಿಕರಲ್ಲಿ ಬೇಸರ ಮೂಡಿದೆ.

ಪಟ್ಟಣದ ಬಸವೇಶ್ವರ ಬಡಾವಣೆಯ ಸಮೀಪದಲ್ಲಿರುವ ವಸತಿ ಗೃಹಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಪೌರಕಾರ್ಮಿಕರಿಗೆ ಮಾತ್ರ ವಸತಿ ಗೃಹಗಳನ್ನು ಕಡಿಮೆ ಬಾಡಿಗೆಗೆ ನೀಡಲಾಗಿದೆ. ಉಳಿದವರು ಬಾಡಿಗೆ ಮನೆಗಳಲ್ಲಿದ್ದಾರೆ.

‘ನಾವು ಇಲ್ಲೆ ಹುಟ್ಟಿ ಬೆಳೆದಿದ್ದೇವೆ. ನಿವೃತ್ತಿಯ ಬಳಿಕ ಇಲ್ಲೆ ವಾಸಮಾಡಬೇಕು. ನಿವೇಶನ ಮಂಜೂರು ಮಾಡಿಕೊಟ್ಟರೆ, ನಮ್ಮ ಶಕ್ತಾನುಸಾರ ಸಾಲ ಮಾಡಿಯಾದರೂ ಮನೆ ಕಟ್ಟಿಕೊಳ್ಳುತ್ತೇವೆ. ಜಾಗದ ಕೊರತೆಯಿದೆ ಎಂದು ಜಿ+ ಕೆಟಗೆರಿಯ ಮನೆಗಳನ್ನು ನಿರ್ಮಿಸಿಕೊಟ್ಟರೆ, ನಮಗೆ ಏನೂ ಉಪಯೋಗವಾಗುವುದಿಲ್ಲ. ನಮ್ಮ ಹೆಸರಿನಲ್ಲೆ ನಿವೇಶನ ನೋಂದಣಿ ಮಾಡಿಸಿಕೊಡಬೇಕು’ ಎಂದು ಪೌರಕಾರ್ಮಿಕರು ಕೋರಿದ್ದಾರೆ.

ವಿ.ಕುಮಾರ್
ವಿ.ಕುಮಾರ್
ದುಡಿಮೆ ಅರ್ಧಭಾಗ ಬಾಡಿಗೆಗೆ ದುಡಿಮೆಯಲ್ಲಿ ಅರ್ಧಭಾಗ ಮನೆ ಬಾಡಿಗೆಗೆ ಸರಿಹೋಗುತ್ತಿದೆ. ಉಳಿದ ಅರ್ಧದಲ್ಲಿ ಕುಟುಂಬ ನಿರ್ವಹಣೆ ಮಕ್ಕಳ ಶಿಕ್ಷಣ ಆರೋಗ್ಯ ಸುಧಾರಣೆ ಎಲ್ಲವೂ ಮಾಡಿಕೊಳ್ಳಬೇಕು. ನಮಗೆ ನಿವೇಶನ ನೀಡಿದರೆ ಸಾಲ ಮಾಡಿಯಾದರೂ ಮನೆ ಕಟ್ಟಿಕೊಂಡು ಬಾಡಿಗೆ ಹಣ ಉಳಿಸಿಕೊಂಡು ಜೀವನ ಮಾಡುತ್ತೇವೆ.
ವಿ.ಕುಮಾರ್ ಪೌರಕಾರ್ಮಿಕ
ಶಾರದಮ್ಮ
ಶಾರದಮ್ಮ
ಅಲ್ಪ ವೇತನದ ಜೀವನ ಜಂಜಾಟ ಅಲ್ಪ ವೇತನದಲ್ಲೇ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇವೆ. ಈಗ ಕಾಯಂ ಮಾಡಿದ್ದರೂ ನಮಗೆ ಸ್ವಂತ ಮನೆ ಇಲ್ಲದೆ ಹೋದರೆ ದುಡಿದ ಹಣವೆಲ್ಲಾ ಬಾಡಿಗೆ ಕಟ್ಟಬೇಕಾಗುತ್ತದೆ. ಆದ್ದರಿಂದ ನಮಗೂ ನಿವೇಶನ ಮಂಜೂರು ಮಾಡಿಕೊಟ್ಟರೆ ಅನುಕೂಲವಾಗುತ್ತದೆ.
ಶಾರದಮ್ಮ ಪೌರಕಾರ್ಮಿಕ ಮಹಿಳೆ
ಲಕ್ಷ್ಮಣ್
ಲಕ್ಷ್ಮಣ್
ನಿವೇಶನ ಕೊಡಿ ಹಲವಾರು ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸಿಗುತ್ತಿರುವ ಸಂಬಳ ತೀರಾ ಕಡಿಮೆ. ಈಗಷ್ಟೆ ಸರ್ಕಾರ ಕಾಯಂಗೊಳಿಸಿದೆ. ಇದುವರೆಗೂ ನಾವು ಬಾಡಿಗೆ ಮನೆಗಳಲ್ಲೆ ಇದ್ದೇವೆ. ನಮಗೆ ನಿವೇಶನ ಮಂಜೂರು ಮಾಡಿಕೊಡಿ.
ಲಕ್ಷ್ಮಣ್ ಪೌರಕಾರ್ಮಿಕ
ಜಿ.ಆರ್.ಸಂತೋಷ್
ಜಿ.ಆರ್.ಸಂತೋಷ್
ವಿಜಯಪುರ ಪ್ರಯತ್ನಕ್ಕೆ ಸಿಗದ ಫಲ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸಲು ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಫಲ ಸಿಗುತ್ತಿಲ್ಲ. ಭೂ ಮಾಪನ ಇಲಾಖೆಯವರು ಸಹಕಾರ ನೀಡಿ ಸರ್ವೆ ಮಾಡಿಕೊಟ್ಟರೆ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ.
–ಜಿ.ಆರ್.ಸಂತೋಷ್ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT