ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಳು ಮಂದಿ ಅಕ್ಕಯ್ಯಮ್ಮನವರಿಗೆ ಒಬ್ಬನೇ ಅಣ್ಣ ಮುನೇಶ್ವರ’: ವಿಶಿಷ್ಟ ಆಚರಣೆ

Last Updated 26 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ವಿಜಯಪುರ: ಹಲವಾರು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಂಡಿರುವ ಬಯಲು ಸೀಮೆ ಭಾಗದಲ್ಲಿನ ಜನರ ಹಲವಾರು ಹಬ್ಬಗಳ ಆಚರಣೆಯಲ್ಲಿ ಮುಂದ್ಯಾವರ (ಮುನಿದ್ಯಾವರ) ಆಚರಣೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಈ ಭಾಗದ ಜನರ ಜೀವನದೊಂದಿಗೆ ಧಾರ್ಮಿಕ ಆಚರಣೆಯಾಗಿರುವ ಮುನಿದ್ಯಾವರ ಆಚರಣೆಯೂ ಶ್ರದ್ಧೆ, ಭಕ್ತಿ, ಅತಿಥಿಗಳ ಅತಿಥ್ಯದ ವಿಚಾರದಲ್ಲಿ ವಿಶೇಷ ಸ್ಥಾನಮಾನಗಳನ್ನು ಪಡೆದುಕೊಂಡಿದೆ.

ಮುನಿದ್ಯಾವರ ಆಚರಣೆಯು ಶಿವರಾತ್ರಿ ಹಬ್ಬದ ನಂತರ ಶುರುವಾಗಿ, ಯುಗಾದಿ ಹಬ್ಬದ ಆರಂಭದವರೆಗೂ ಮುಂದುವರೆಯುತ್ತದೆ. ವಾರದಲ್ಲಿ ಮಂಗಳವಾರ, ಮತ್ತು ಶುಕ್ರವಾರದ ದಿನಗಳಲ್ಲಿ ಸಾಮೂಹಿಕವಾಗಿ ಆಚರಿಸಲಾಗುತ್ತದೆ.

‘ಏಳು ಮಂದಿ ಅಕ್ಕಯ್ಯಮ್ಮನವರಿಗೆ (ಹೆಣ್ಣು ದೇವರುಗಳು) ಇರುವ ಒಬ್ಬನೇ ಅಣ್ಣ ಮುನೇಶ್ವರ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಇವರನ್ನು ಪೂಜಿಸಿ ಸಂತೃಪ್ತಿಗೊಳಿಸುವ ಆಚರಣೆಯೇ ಇದು’ ಎಂದು ಹಿರಿಯ ವೆಂಕಟಸ್ವಾಮಪ್ಪ ಹೇಳುತ್ತಾರೆ.

ಬಯಲುಸೀಮೆ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ತುಮಕೂರು ಭಾಗಗಳಲ್ಲಿ ಈ ಆಚರಣೆ ಹೆಚ್ಚು ಪ್ರಚಲಿತವಾಗಿದೆ.

ಆಚರಣೆಯ ಕ್ರಮ: ಏಳು ಮಂದಿ ಅಕ್ಕಯ್ಯಮ್ಮನವರನ್ನು ಪ್ರತಿನಿಧಿಸುವ ಏಳು ಕಲ್ಲುಗಳನ್ನು ತಮ್ಮ ಹೊಲಗಳಲ್ಲಿ ಅಥವಾ ಊರ ಹೊರಗೆ ನಕ್ಕಲಿ ರೆಂಬೆಗಳಿಂದ ಗುಡಿಗಳನ್ನು ಕಟ್ಟಿ ಪೂಜಿಸುತ್ತಾರೆ. ಮುನೇಶ್ವರನನ್ನು ಪ್ರತಿನಿಧಿಸುವ ಮತ್ತೊಂದು ಕಲ್ಲನ್ನು ಇಟ್ಟು ಪೂಜಿಸುತ್ತಾರೆ.

ಊರಿಂದ ಹೊರಗೆ ಹೊಲಗದ್ದೆಗಳಿಗೆ ಹೋಗಿ ಅಲ್ಲಿಯೇ ಗುಡಿ ನಿರ್ಮಿಸಿ ಮನೆಯಿಂದ ತೆಗೆದುಕೊಂಡು ಹೋಗಿರುವ ಅಕ್ಕಿ, ಪೂಜಾ ಸಾಮಗ್ರಿಗಳನ್ನು ಬಳಸಿ ತಳಿಗೆ ತಯಾರಿಸುತ್ತಾರೆ. ಸಿದ್ದಗೊಂಡ ತಳಿಗೆಯನ್ನು ದೇವರ ಮುಂದೆ ಎಡೆ ಹಾಕಿ ಹಾಲು ಸುರಿದು ಅರಿಶಿನ ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆಯುವ ಮೂಲಕ ಪೂಜಿಸುತ್ತಾರೆ.

ಇದಾದ ಬಳಿಕ ದೇವರಿಗೆ ಕೋಳಿಯನ್ನೋ, ಕುರಿಯನ್ನೋ ಬಲಿ ನೀಡಿದ ನಂತರ ಪೂಜೆಯಲ್ಲಿ ಭಾಗವಹಿಸಿರುವ ಸಂಬಂಧಿಕರು, ಸ್ನೇಹಿತರಿಗೆ ಮಾಂಸಹಾರದ ಅತಿಥ್ಯ ನೀಡುವ ಮೂಲಕ ಹಬ್ಬ ಆಚರಿಸುತ್ತಾರೆ. ದೊಡ್ಡ ಮಟ್ಟದಲ್ಲಿ ಆಚರಿಸುವವರು ಕಲ್ಯಾಣ ಮಂಟಪ, ದೇವಾಲಯದ ಸಮುದಾಯ ಭವನಗಳು ಇಲ್ಲವೇ ಮನೆಗಳ ಮುಂದೆ ಬೃಹತ್ ಪೆಂಡಾಲ್ ಹಾಕಿಸುವ ಮೂಲಕವೂ ಆಚರಿಸುತ್ತಾರೆ.

ಮಕ್ಕಳ ಹಬ್ಬ: ‘ಸಾಮಾನ್ಯವಾಗಿ ಹೆರಿಗೆಯಾದಾಗ ಮುಂದ್ಯಾವರ ಮಾಡುತ್ತಾರೆ. ಕೆಲವರು ಆರು ತಿಂಗಳಿಗೆ ಮಾಡಿದರೆ ಮತ್ತೆ ಕೆಲವರು ಒಂದು ವರ್ಷ ಎರಡು ವರ್ಷಕ್ಕೂ ಮಾಡುತ್ತಾರೆ. ಅದೇ ದಿನ ಮಗುವಿನ ಕೂದಲನ್ನು ತೆಗೆಸುವ ವಾಡಿಕೆ ಇದೆ’ ಎಂದು ಹಿರಿಯ ನಾರಾಯಣಸ್ವಾಮಪ್ಪ ಹೇಳಿದರು.

ವರ್ಷಕ್ಕೊಮ್ಮೆ ಆಚರಣೆ: ಮಕ್ಕಳಿರುವ ಮನೆಗಳಲ್ಲಿ ಏನೂ ಕೇಡಾಗಬಾರದು ಎನ್ನುವ ಉದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಕಡ್ಡಾಯವಾಗಿ ಈ ಆಚರಣೆ ಮಾಡಲಾಗುತ್ತದೆ.

ಸುಗ್ಗಿಯ ನಂತರ ರೈತರು ಬಿಡುವಿನಿಂದ ಇರುತ್ತಾರೆ. ಹಾಗಾಗಿ ಈ ಸಂದರ್ಭದ ಆಚರಣೆಗಳಿಗೆ ಮಹತ್ವ ಹೆಚ್ಚಿದೆ. 10 ರಿಂದ 15 ದಿನಗಳ ಕಾಲ ನಡೆಯುವ ಈ ಮುನಿದ್ಯಾವರವನ್ನು ಜನರು ಒಗ್ಗೂಡಿ ಆಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT