ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14,266 ಮಕ್ಕಳಿಗೆ ರೋಗ ನಿರೋಧಕ ಲಸಿಕೆ : ಜಿಲ್ಲಾ ಆರೋಗ್ಯಾಧಿಕಾರಿ

Last Updated 20 ಏಪ್ರಿಲ್ 2019, 13:37 IST
ಅಕ್ಷರ ಗಾತ್ರ

ದೇವನಹಳ್ಳಿ: ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 14,266 ಮಕ್ಕಳಿಗೆ ತಪಾಸಣೆ ನಡೆಸಿ ರೋಗ ನಿರೋಧಕ ಲಸಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಹೇಳಿದರು.

ಇಲ್ಲಿನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಸಿಗುವ ಉಚಿತ ಆರೋಗ್ಯ ಸೌಲಭ್ಯ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಹತ್ತು ಲಕ್ಷ ಜನಸಂಖ್ಯೆ ಇದೆ. ನಾಲ್ಕು ಸಾರ್ವಜನಿಕ ಆಸ್ಪತ್ರೆ, ಐವತ್ತು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು ಈ ಪೈಕಿ 16 ಕೇಂದ್ರಗಳಲ್ಲಿ ದಿನದ 24 ತಾಸು ಕರ್ತವ್ಯ ನಿರ್ವಹಿಸಲಾಗುತ್ತಿದೆ. 1,320 ಗ್ರಾಮಗಳ ಪೈಕಿ 1,230 ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳಿದ್ದು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರು ಮಾರಕ ರೋಗಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಮಾನವನಿಗೆ ವಿವಿಧ ರೋಗಗಳು ಬರಬೇಕಾದರೆ ವಾಸವಿರುವ ಪರಿಸರ ಮತ್ತು ಸ್ವಚ್ಛತೆ, ಆಹಾರ ಸೇವನೆ, ಕುಡಿಯುವ ನೀರು ಅತಿಮುಖ್ಯ ಕಾರಣವಾಗುತ್ತಿದೆ ಎಂದರು.

ಮಹಿಳೆಯರಿಗೆ ಗರ್ಭಾವಸ್ಥೆ ಮಗುವಿನಿಂದ ಚಿಕಿತ್ಸೆ ಆರಂಭವಾಗುತ್ತದೆ. ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡಲಾಗುತ್ತಿದೆ. ಹೆರಿಗೆಯ ನಂತರ ಮಗುವಿಗೆ ಆರೋಗ್ಯ ರಕ್ಷಣೆಗಾಗಿ ಪೋಲಿಯೊ, ಕಾಮಾಲೆ, ದಡಾರ, ರೂಬೆಲ್ಲಾ ರಾತ್ರಿ ಕುರುಡು, ನಾಯಿ ಕೆಮ್ಮು, ಧನುರ್ವಾಯು, ಡಿಫ್ತೀರಿಯಾ ಅನೇಕ ರೋಗಗಳಿಗೆ ಮುಂಜಾಗ್ರತಾ ಕ್ರಮವಾಗಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ರೋಗ ನಿರೋಧಕ ಶಕ್ತಿಯ ಲಸಿಕೆ ಎಲ್ಲ ಮಕ್ಕಳು ಪಡೆದರೆ ಶೇ 100 ರಷ್ಟು ವಿವಿಧ ಮಾರಕ ರೋಗ ನಿಯಂತ್ರಿಸಲು ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 14 ಸಾವಿರ ಗರ್ಭಿಣಿಯರಿದ್ದಾರೆ. 2020ನೇ ಸಾಲಿನ ಮಾರ್ಚ್ 10 ಮತ್ತು 11 ರಂದು ಪಲ್ಸ್ ಪೋಲಿಯೊ ಒಂದೇ ಹಂತದ ಕಾರ್ಯಕ್ರಮವಿದೆ. 2014 ರಿಂದ ದೇಶದಲ್ಲಿ ಪೋಲಿಯೊ ಮುಕ್ತವಾಗಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಪ್ರಭಾರಿ ಉಸ್ತುವಾರಿ ಡಾ.ಶ್ರೀನಿವಾಸ್ ಮಾತನಾಡಿ, ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ₹ 600, ಪುರುಷರಿಗೆ ₹ 1,200 ನೀಡಲಾಗುತ್ತದೆ. ಪುರುಷರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಾರೆ. ಒಂದು ವರ್ಷದಲ್ಲಿ 37 ಪುರುಷರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ರಾಜ್ಯ ಮಟ್ಟದಲ್ಲಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ ಎಂದು ಹೇಳಿದರು.

ಶಸ್ತ್ರಚಿಕಿತ್ಸೆಯಿಂದ ಗಂಡಸುತನಕ್ಕೆ ಯಾವ ತೊಂದರೆ ಇಲ್ಲ. ಚಿಕಿತ್ಸೆಯ ನಂತರ ಏಳು ದಿನದೊಳಗೆ ಮರಣ ಹೊಂದಿದರೆ ಎರಡು ಲಕ್ಷ, ಚಿಕಿತ್ಸೆ ವಿಫಲವಾದರೆ ಮೂವತ್ತು ಸಾವಿರ ಇಲಾಖೆ ಭರಿಸಲಿದೆ ಎಂದು ಹೇಳಿದರು.

ದೇಶದಲ್ಲಿ ಶ್ರವಣ ದೋಷವುಳ್ಳವರ ಸಂಖ್ಯೆ 63 ಲಕ್ಷ ಇದೆ. 14 ವರ್ಷದೊಳಗಿನ ಮಕ್ಕಳು ಶೇ 60 ರಷ್ಟು ಇದ್ದಾರೆ, ಪ್ರತಿ ವಾರಕ್ಕೊಮ್ಮೆ ಶ್ರವಣ ದೋಷ ಪರೀಕ್ಷೆ ಶಿಬಿರ ಸರ್ಕಾರಿ ಅಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಇಲಾಖೆ ಕಾಯಕಲ್ಪ ಸ್ವಚ್ಛತಾ ಆಧಿಕಾರಿ ಡಾ. ಗುಣಶೀಲಾ ಮಾತನಾಡಿ, ಇಲಾಖೆ ಜನನದಿಂದ ಮರಣದವರೆಗೆ ಉಚಿತ ಸೇವೆ ನೀಡುತ್ತದೆ. ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸ್ವಚ್ಛತೆ ಮುಖ್ಯ. ಕಾಯಕಲ್ಪ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗಲ್ಲಿ ಉತ್ತಮ ಸ್ವಚ್ಛತೆ ಕಾಯ್ದುಕೊಂಡರೆ ಒಂದು ಹಾಸಿಗೆ ಲೆಕ್ಕದಲ್ಲಿ ₹10 ಸಾವಿರ , ನೂರು ಹಾಸಿಗೆ ಆಸ್ಪತ್ರೆಗೆ ₹10 ಲಕ್ಷ ನೀಡಲಾಗುತ್ತದೆ ಎಂದರು.

ಈ ಬಾರಿ ಜಿಲ್ಲೆಯ ವಿಜಯಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದು ₹10 ಲಕ್ಷ ರೂಪಾಯಿ ಪುರಸ್ಕಾರ ಪಡೆದುಕೊಂಡಿದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವೆಂದರು. ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಶಾಂತ, ತಂಬಾಕು ನಿಯಂತ್ರಣಾಧಿಕಾರಿ ಡಾ. ವಿದ್ಯಾರಾಣಿ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗೋವಿಂದರಾಜು, ಖಲೀಲ್ ಅಹಮದ್ ಇದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಕಾರ್ಯಾಗಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT