ವಿಜಯಪುರ(ದೇವನಹಳ್ಳಿ): ಬೆಂಗಳೂರು-ಹೈದರ್‌ಬಾದ್ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಕೇಳಸೇತುವೆ ಮತ್ತು ಸರ್ವಿಸ್ ರಸ್ತೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗೇಟ್‌ನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯು ಅಪಘಾತಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಬೆಂಗಳೂರು–ಹೈದರ್‌ಬಾದ್ ಕಡೆಗೆ ಪ್ರತಿ ಗಂಟೆಗೆ ನೂರಾರು ವಾಹನಗಳು ಸಂಚರಿಸುತ್ತವೆ. ಸ್ಥಳೀಯವಾಗಿರುವ ಬಂಡೆಗಳಿಂದ ಜಲ್ಲಿ, ಎಂ.ಸ್ಯಾಂಡ್ ಸಾಗಣೆ ಮಾಡುವ ಟಿಪ್ಪರ್ ಮತ್ತು ಸರಕು ಸಾಗಾಣಿಕೆ ವಾಹನಗಳು ಅತಿಯಾದ ವೇಗದಲ್ಲಿ ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹಳ್ಳಿಗಳ ದ್ವಿಚಕ್ರ ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಾರೆ. ರಸ್ತೆ ದಾಟಲು ಪ್ರಯತ್ನದಲ್ಲಿ ಹಲವು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ.
ದಂಡಿಗಾನಹಳ್ಳಿ, ಬೈರಾಪುರ, ಹಾರೋಹಳ್ಳಿ, ಬುಳ್ಳಹಳ್ಳಿ, ಗ್ರಾಮದ ಜನರು ವೆಂಕಟಗಿರಿಕೋಟೆ ಕಡೆ ತೆರಳಬೇಕಾದರೆ, ರಾಷ್ಟ್ರೀಯ ಹೆದ್ದಾರಿ ದಾಟಿಕೊಂಡು ಹೋಗಬೇಕು. ದೇವನಹಳ್ಳಿಯ ಕಡೆಯಿಂದ ಬರುವ ಗ್ರಾಮಸ್ಥರು ಹೆದ್ದಾರಿ ದಾಟಿಕೊಂಡು ಬರಬೇಕು. ರಸ್ತೆ ದಾಟುವಾಗ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ದಾಟಬೇಕಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಬುಳ್ಳಹಳ್ಳಿ ಗೇಟ್‌ನಲ್ಲಿ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಸೂಚನೆ ನೀಡಲು ರಸ್ತೆಯಲ್ಲಿ ಸೋಲಾರ್ ಹಳದಿ ದೀಪಗಳನ್ನು ಅಳವಡಿಸಲಾಗಿದೆ. ಆದರೂ ವಾಹನ ಸವಾರರು ನಿರ್ಲಕ್ಷಿಸಿ ವೇಗವಾಗಿಯೇ ಚಲಾಯಿಸುತ್ತಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಮೀಪ ಡಾಬಾಗಳಿವೆ. ಇಲ್ಲಿ ಊಟಕ್ಕೆಂದು ಬರುವವರು, ಮದ್ಯಪಾನ ಮಾಡಿಕೊಂಡು ಹೋಗುವಾಗ ವೇಗವಾಗಿ ಬರುವ ವಾಹನ ಗಮನಿಸಲು ಸಾಧ್ಯವಾಗದೆ ಅಪಘಾತಗಳಿಗೆ ಒಳಗಾಗುತ್ತಾರೆ. ಕೆಲವರು ಮೃತಪಟ್ಟಿದ್ದಾರೆ. ಕೆಲವರು ಕೈಕಾಲು ಮುರಿದುಕೊಂಡಿದ್ದಾರೆ.
ಸ್ಥಳೀಯರ ಸಂಚಾರ ಮಾಡುವುದಕ್ಕೆ ಸರ್ವಿಸ್ ರಸ್ತೆಯನ್ನು ಮಾಡಿಕೊಟ್ಟಿಲ್ಲ. ಹಿಂದಿನ ಶಾಸಕರು, ಸಚಿವರು, ಕೇಂದ್ರ ಹೆದ್ದಾರಿ ಮಂತ್ರಿ, ಸೇರಿದಂತೆ ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದೆವು. ಇದುವರೆಗೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎನ್‌ಎಚ್‌ಎ ಯೋಜನಾ ನಿರ್ದೇಶಕರಿಗೆ ಪತ್ರ ‘ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿಯ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಅತಿವೇಗವಾಗಿ ಸಂಚರಿಸುತ್ತಿದೆ. ಇದರಿಂದ ಅಪಘಾತ ಹೆಚ್ಚಳವಾಗಿದೆ. ಹೀಗಾಗಿ ತ್ವರಿತವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಬೇಕು. ಅಪಘಾತ ತಡೆಯಲು ಬ್ಯಾರಿಕೇಡ್ ಅಳವಡಿಸಬೇಕು ಎಂದು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ’ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.