ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: ರೈತರ ಸಂತಸ, ಗ್ರಾಹಕರ ಸಂಕಷ್ಟ

ಶತಕ ಬಾರಿಸಿದ ಟೊಮೆಟೊ
Published 21 ಜೂನ್ 2024, 5:15 IST
Last Updated 21 ಜೂನ್ 2024, 5:15 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಟೊಮೆಟೊ ಬೆಲೆ ಏರಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದರೆ, ಗ್ರಾಹಕರನ್ನು ಕಂಗಾಲಾಗುವಂತೆ ಮಾಡಿದೆ.

ಕೆಲ ದಿನಗಳ ಹಿಂದೆ ಕೆ.ಜಿಗೆ ₹70–₹80ಕ್ಕೆ ಬಿಕರಿ ಆಗುತ್ತಿದ್ದ ಟೊಮೆಟೊ ಈಗ ಶತಕ ಬಾರಿಸಿದ್ದು, ಗ್ರಾಹಕರ ಕೈ ಸುಡುತ್ತಿದೆ.

ಮಾರುಕಟ್ಟೆಯಲ್ಲಿ ಟೊಮೆಟೊ 15 ಕೆ.ಜಿ.ಬಾಕ್ಸ್ ₹480ರಿಂದ ₹600ವರೆಗೂ ಹರಾಜಾಗುತ್ತಿದ್ದದ್ದು, ಈಗ ₹850 ರಿಂದ ₹1 ಸಾವಿರ ವರೆಗೂ ಹರಾಜಾಗಿದೆ.

ಮಳೆ–ಥ್ರಿಪ್ಸ್ ರೋಗದಿಂದ ಬೆಳೆ ಸರಿಯಾಗಿ ಆಗಿಲ್ಲ. ಬೆಳೆ ಬೆಳೆದಿರುವ ರೈತರ ಸಂಖ್ಯೆ ವಿರಳವಾಗಿರುವುದರಿಂದ ಮಾರುಕಟ್ಟೆಗೆ ಬರುವ ಟೊಮೆಟೊ ಆವಕದ ಪ್ರಮಾಣವೂ ಇಳಿಕೆಯಾಗಿದೆ. ಹೀಗಾಗಿ ಟೊಮೆಟೊ ಬೆಲೆ ಮತ್ತೆ ಜಾಸ್ತಿಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮಾರುಕಟ್ಟೆಯಲ್ಲಿ 15 ಕೆ.ಜಿ.ಬಾಕ್ಸ್ 850 ರಿಂದ 1 ಸಾವಿರದವರೆಗೂ ಖರೀದಿಸಿರುವ ವ್ಯಾಪಾರಿಗಳು ಪ್ರತಿ ಕೆ.ಜಿ.ಟೊಮೆಟೊ ₹100ಗೆ ಮಾರಾಟ ಮಾಡುತ್ತಿದ್ದು, ಬೆಲೆ ಕೇಳಿದೊಡನೆ ಗ್ರಾಹಕರು ಕಂಗಾಲಾಗುತ್ತಿದ್ದಾರೆ.

‘ಈ ಬಾರಿ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಹರಸಾಹಸ ಪಟ್ಟಿದ್ದೇನೆ. ಬಾರಿ ಎಲ್ಲಿಯೂ ಬೆಳೆಗಳಾಗಿಲ್ಲ. ಕಷ್ಟಪಟ್ಟು ಬೆಳೆದರೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಹೀಗಾಗಿ 20 ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದೆ. ಬೆಳೆ ರಕ್ಷಣೆಗೆ ₹70 ಸಾವಿರ ಮೌಲ್ಯದಷ್ಟು ಔಷಧಿ ಸಿಂಪಡಣೆ ಮಾಡಿದ್ದೇನೆ. ಬೆಳೆ ಕಟಾವಿಗೆ ಬರುವವರೆಗೂ ಸಾಲ ಮಾಡಿ ಸಾಕಷ್ಟು ಖರ್ಚು ಮಾಡಿದ್ದೇನೆ. ಈಗ ಉತ್ತಮ ಬೆಲೆ ಸಿಕ್ಕಿದೆ. ಸಾಲ ತೀರಿಸಿಕೊಳ್ಳಬಹುದು ಎನ್ನುತ್ತಾರೆ ರೈತ ದೇವರಾಜಪ್ಪ.

‘ಮಾರುಕಟ್ಟೆಯಲ್ಲಿ ಖರೀದಿ ಮಾಡಿರುವ ಬೆಲೆ ಹಾಗೂ ಸಾಗಾಣಿಕೆ ವೆಚ್ಚ ಸೇರಿ ಕೆಜಿಗೆ ₹10 ಮಾತ್ರ ಲಾಭ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಒಂದು ಕೆ.ಜಿ.ಖರೀದಿ ಮಾಡುತ್ತಿದ್ದ ಗ್ರಾಹಕರು, ಅರ್ಧ ಕೆಜಿಗೆ ಇಳಿದಿದ್ದಾರೆ. ವ್ಯಾಪಾರವಾಗದಿದ್ದರೆ ಹೆಚ್ಚು ದಿನಗಳು ಇಡಲು ಆಗಲ್ಲ, ಹಣ್ಣು ಮೆತ್ತಗಾದರೆ. ಅದನ್ನು ತಿಪ್ಪೆಗೆ ಹಾಕಬೇಕಾಗುತ್ತದೆ’ ಎಂದು ವ್ಯಾಪಾರಿ ನರಸಮ್ಮ ಹೇಳುತ್ತಾರೆ.

ದಿನಕ್ಕೆ 300 ರೂಪಾಯಿ ಕೂಲಿ ಮಾಡಿಕೊಂಡು ಬಂದು ₹100 ಟೊಮೆಟೊಗೆ ಕೊಟ್ಟರೆ ನಾವು ತಿನ್ನುವುದೇನು? ಬೇರೆ ಸಾಮಗ್ರಿ ಖರೀದಿ ಮಾಡುವುದೇಗೆ? ಅದಕ್ಕೆ ಟೊಮೆಟೊ ಬದಲಿಗೆ ಹುಣಸೇಹಣ್ಣು ಖರೀದಿ ಮಾಡಿತ್ತಿದ್ದೇವೆ.

-ಶೋಭಮ್ಮ ಗ್ರಾಹಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT