ಬುಧವಾರ, ಮಾರ್ಚ್ 22, 2023
33 °C

ಹೊಸಕೋಟೆ: ‘ಧರ್ಮದ ಹಾದಿಯಲ್ಲಿ ಸಾಗಿ’:ಸಚಿವ ಎಂ.ಟಿ.ಬಿ. ನಾಗರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ಮನುಷ್ಯ ಜೀವನದಲ್ಲಿ ಇನ್ನೊಬ್ಬರಿಗೆ ಅನ್ಯಾಯ, ಮೋಸ ಮಾಡದೆ ಧರ್ಮದ ಹಾದಿಯಲ್ಲಿ ಸಾಗಿದರೆ ಬದುಕು ಸಾರ್ಥಕವಾಗುತ್ತದೆ’ ಎಂದು ಸಚಿವ ಎಂ.ಟಿ.ಬಿ. ನಾಗರಾಜ್‌ ತಿಳಿಸಿದರು.

ತಾಲ್ಲೂಕಿನ ಬಾಣಮಾಕನಹಳ್ಳಿಯಲ್ಲಿ ನಡೆದ ಶ್ರೀರಾಮ ಪಾದಸೇವಾ ದುರಂದರ ಶ್ರೀಅಭಯ ಆಂಜನೇಯ ಸ್ವಾಮಿ ದೇವಾಲಯದ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ಜೀವನದಲ್ಲಿ ಇತರರಿಗೆ ಮೋಸ, ಅನ್ಯಾಯ ಮಾಡಿ ದೇವರ ಬಳಿಗೆ ಬಂದು ವಿಜೃಂಭಣೆಯಿಂದ ಪೂಜೆ ಸಲ್ಲಿಸಿದರೆ ಯಾವುದೇ ಸಾರ್ಥಕತೆ ಬರುವುದಿಲ್ಲ. ಬದಲಾಗಿ ಆತ್ಮಶುದ್ಧಿ ಇಟ್ಟುಕೊಂಡು ನಿರ್ಗತಿಕರಿಗೆ ನೆರವಾಗುವ ಮೂಲಕ ಜೀವಿಸಿದರೆ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ದೇವಾಲಯದ ಪುನರ್‌ ಪ್ರತಿಷ್ಠಾಪನಾ ಕಾರ್ಯ ದಾನಿಗಳ ನೆರವಿನಿಂದ ವಿಜೃಂಭಣೆಯಿಂದ ನಡೆದಿದೆ. ಗ್ರಾಮಸ್ಥರು ಶಾಂತಿ, ನೆಮ್ಮದಿಯಿಂದ ನಿತ್ಯಪೂಜೆ ಮಾಡುವ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ತಿಳಿಸಿದರು.

‘ನಾನು ನನ್ನ ರಾಜಕೀಯ ಜೀವನದಲ್ಲಿ ತಾಲ್ಲೂಕಿನಲ್ಲಿರುವ ನೂರಾರು ದೇವಾಲಯಗಳಿಗೆ ನೆರವು ನೀಡಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೊಸಕೋಟೆ ನಗರದ ಇತಿಹಾಸ ಪ್ರಸಿದ್ಧ ಐದು ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಿ ಪುನರ್‌ ಪ್ರತಿಷ್ಠಾಪನೆಗೆ ಶ್ರಮಿಸಿದ್ದೇನೆ’ ಎಂದರು.

ಗ್ರಾ.ಪಂ. ಮಾಜಿ ಸದಸ್ಯರಾದ ಮಂಜುನಾಥ್‌ ಮಾತನಾಡಿ, ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಆರ್ಥಿಕ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ಎಂ.ಟಿ.ಬಿ. ನಾಗರಾಜ್‌ ಹಾಗೂ ದಾನಿಗಳ ನೆರವಿನಿಂದ ದೇವಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಚನ್ನಸಂದ್ರ ಸಿ. ನಾಗರಾಜ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ. ಸತೀಶ್, ಲಿಂಗಾಪುರ ಮಂಜುನಾಥ್, ವೆಂಕಟಗಿರಿ ಯಪ್ಪ, ಕಲ್ಲಪ್ಪ, ವೀರಭದ್ರಪ್ಪ, ಚಿಕ್ಕಪ್ಪಯ್ಯ, ಮಂಜುನಾಥ್, ಶ್ಯಾಮಣ್ಣ, ಸೀನಪ್ಪ, ಕನಕರಾಜು, ನಾಗೇಶ್, ಕಾಂತ ರಾಜ್, ಕಲ್ಲೇಶ್, ಜಗದೀಶ್, ರಾಮು, ಆಂಜಿನಪ್ಪ, ಕುಮಾರ್, ರಾಮಕುಮಾರ್, ನಾಗರಾಜು, ನಾರಾಯಣಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು