ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಸರ್ಕಾರಿ ಕಾಲೇಜಿನ ಪ್ರವೇಶಕ್ಕೆ ನೂಕುನುಗ್ಗಲು

ರಾಜ್ಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜುಗಳ ಪೈಕಿ ಇದೂ ಒಂದು
Last Updated 24 ಮೇ 2018, 19:40 IST
ಅಕ್ಷರ ಗಾತ್ರ

ಸಾಗರ: ಪಿಯು ವಿಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವಾಗ ಇದಕ್ಕೆ ಅಪವಾದ ಎನ್ನುವಂತೆ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶಕ್ಕೆ ನೂಕುನುಗ್ಗಲು ಶುರುವಾಗಿದೆ.

ನೆಹರೂ ಮೈದಾನದ ಎದುರು ಇರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರತಿವರ್ಷ ಪ್ರವೇಶದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಇಲ್ಲಿ ಪ್ರವೇಶ ಪಡೆಯಲು ಸಾಗರ ತಾಲ್ಲೂಕಿನ ಮೂಲೆಮೂಲೆಯ ಹಳ್ಳಿಗಳ ಜೊತೆಗೆ ಪಕ್ಕದ ಉತ್ತರ ಕನ್ನಡ, ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳೂ ಬರುತ್ತಾರೆ.

ನಿಗದಿಪಡಿಸಿರುವ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿವರ್ಷ ಅರ್ಜಿಗಳು ಬರುವುದರಿಂದ ಪ್ರವೇಶಕ್ಕಾಗಿ ಸದಾ ಪೈಪೋಟಿ. ಇಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಲವು ರೀತಿಯ ‘ಪ್ರಭಾವ’ ಬಳಸಲು ಮುಂದಾಗುವುದರಿಂದ ಕಾಲೇಜಿನ ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಸೀಟು ಒದಗಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ.

2017-18ನೇ ಸಾಲಿನಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುನಲ್ಲಿ ಒಟ್ಟು 2,388 ವಿದ್ಯಾರ್ಥಿಗಳು ಓದಿದ್ದಾರೆ. ಈ ವರ್ಷ ಈ ಸಂಖ್ಯೆಯನ್ನು ಮೀರಿ ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಪಡೆದಿದ್ದಾರೆ.

ಪ್ರತಿವರ್ಷ ವಿಜ್ಞಾನ ವಿಭಾಗವೂ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಬರುತ್ತಿರುವುದೇ ಇಲ್ಲಿ ಪ್ರವೇಶಕ್ಕಾಗಿ ಪೈಪೋಟಿ ಏರ್ಪಡಲು ಕಾರಣವಾಗಿದೆ. ಕಳೆದ ಸಾಲಿನಲ್ಲಿ ಕಾಲೇಜಿಗೆ ಒಟ್ಟಾರೆ ಶೇ 75.54ರಷ್ಟು ಫಲಿತಾಂಶ ಲಭ್ಯವಾಗಿದ್ದು, ವಿಜ್ಞಾನ ವಿಭಾಗದಲ್ಲಿ 55, ವಾಣಿಜ್ಯ ವಿಭಾಗದಲ್ಲಿ 38 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

2007ನೇ ಸಾಲಿನಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಾಗಲೇ ಈ ಕಾಲೇಜು ರಾಜ್ಯದಾದ್ಯಂತ ಹೆಸರು ಮಾಡಿತ್ತು. ಈಗಲೂ ಅತಿ ಹೆಚ್ಚು ಪ್ರವೇಶ ದಾಖಲಾಗುತ್ತಿರುವ ರಾಜ್ಯದ ಕಾಲೇಜುಗಳ ಪಟ್ಟಿಯಲ್ಲಿ ಇಲ್ಲಿನ ಕಾಲೇಜು ಮುಂಚೂಣಿಯಲ್ಲಿದೆ.

ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲಿ ಒಟ್ಟು 28 ತರಗತಿಗಳು ನಡೆಯುತ್ತಿದ್ದು, ಪ್ರತಿ ತರಗತಿಯಲ್ಲಿ ಸರಾಸರಿ 75ರಿಂದ 80 ವಿದ್ಯಾರ್ಥಿಗಳು ಓದುತ್ತಾರೆ. ಉಪನ್ಯಾಸಕರು ಕಡೆಯ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳಿಗೂ ಧ್ವನಿ ಕೇಳಬೇಕು ಎನ್ನುವ ಕಾರಣಕ್ಕೆ ಮೈಕ್ ಬಳಸುತ್ತಿರುವುದು ಈ ಕಾಲೇಜಿನ ವಿಶೇಷತೆ.

ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಹೀಗೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಾರೆ ಎನ್ನುವುದು ಗಮನಾರ್ಹ.

* ಅತ್ಯುತ್ತಮ ಫಲಿತಾಂಶ ಬರುತ್ತಿರುವುದರಿಂದ ಸಾಗರವಲ್ಲದೆ ಇತರ ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಪ್ರವೇಶ ಬಯಸಿ ಬರುತ್ತಿದ್ದಾರೆ.

–ಕೆ.ಮಂಜಪ್ಪ, ಪ್ರಾಂಶುಪಾಲರು

| ಎಂ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT