ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಪಾಲಿನ ಮೇರು ನಾಯಕ ಅಪ್ಪ’

ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಆಯೋಜಿಸಿದ್ದ ಅಪ್ಪಂದಿರ ದಿನಾಚರಣೆ
Last Updated 17 ಜೂನ್ 2019, 14:18 IST
ಅಕ್ಷರ ಗಾತ್ರ

ವಿಜಯಪುರ: ‘ಅಪ್ಪ ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೊ’ ಎಂದು ‌ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅದ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಅಪ್ಪಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾನೆ. ನಿದ್ದೆಗೆಡುತ್ತಾನೆ. ನಿಮಗಾಗಿ ಬದುಕು ತೆತ್ತೆ ಎನ್ನದ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾನೆ’ ಎಂದು ವಿವರಿಸಿದರು.

‘ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ. ಅಪ್ಪ ಅನ್ನುವ ಬಂಧವೇ ಅಂಥದ್ದು. ಅಪ್ಪ ಅಂದರೆ ಕೆಲವರಿಗೆ ಸಿಡುಕು, ಗಂಭೀರ ಮುಖವೊಂದು ನೆನಪಾಗುತ್ತದೆ. ಚಿಕ್ಕಂದಿನಲ್ಲಿ ಶಿಕ್ಷೆ ಕೊಡುವ, ಗದರುವ ಅಪ್ಪ, ಬೆಳೆಯುತ್ತಿದ್ದಂತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ನೇಹಿತನಾಗುತ್ತಾನೆ’ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ‘ಅಪ್ಪ ಅಂದರೆ ಕೇವಲ ಜೀವ ಕೊಟ್ಟವನಲ್ಲ. ಬದುಕು ರೂಪಿಸಿದವರು. ಜೀವನದ ದಾರಿ ತೋರಿಸಿದವರು’ ಎಂದರು.

ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ವ್ಯಾತ್ಸಲ್ಯ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಕ್ಕೆ ಮಾತ್ರ ನಿಲುಕುವಂತದ್ದು ಎಂದರು.

ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ ಮಾತನಾಡಿ, ಅಮ್ಮ ಎಂಬ ಪದಕ್ಕಿರುವಷ್ಟೇ ಅನಂತ ವಿಸ್ತಾರ ಅಪ್ಪನೆಂಬ ಪದಕ್ಕೂ ಇದೆ. ಅಪ್ಪನೆಂದರೆ ವಿಶ್ವಾಸ, ಭರವಸೆ. ಜೀವ ಕೊಟ್ಟು, ಜೀವನ ರೂಪಿಸಿದ ಅಪ್ಪ ಅಮ್ಮಂದಿರ ದಿನ ಒಂದು ದಿನಕ್ಕೆ ಸೀಮಿತವಲ್ಲ ಎಂದರು.

‘ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮಲ್ಲಿ ಕೂಡ ಕೆಲ ವರ್ಷಗಳಿಂದ ಅಮ್ಮಂದಿರ ದಿನದಂತೆ, ಅಪ್ಪಂದಿರ ದಿನ ಕೂಡ ಪ್ರಚಲಿತಕ್ಕೆ ಬರುತ್ತಿದೆ. ತಂದೆ ತಾಯಿ ಎಂದರೆ ದೇವರೆಂದು ಪೂಜಿಸುವ ನಮ್ಮ ದೇಶದಲ್ಲಿ ವರ್ಷಗಳು ಕಳೆದಂತೆ ಈ ದಿನ ಮಹತ್ವ ಪಡೆಯುತ್ತಲೇ ಸಾಗಿದೆ. ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೆ ಚಿರಋಣಿಗಳಾಗಿರಬೇಕು’ ಎಂದರು.

ಕಸಾಪ ಮುಖಂಡರಾದ ವಿಶ್ವನಾಥ್, ಪರಮೇಶ್, ಮುನಿರಾಜು, ಡಾ.ಶಿವಕುಮಾರ್, ಮುನಿವೆಂಕಟರಮಣಪ್ಪ, ಮುನಿರಾಜು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT