ಯುವತಿ ಅಪಹರಿಸಿ ಹತ್ಯೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ದೇವನಹಳ್ಳಿ: ತಾಲ್ಲೂಕಿನ ಹರಳೂರು ನಾಗೇನಹಳ್ಳಿ ಗ್ರಾಮದ ದಲಿತ ಯುವತಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪಿವಿಸಿ (ಸ್ವಾಭಿಮಾನಿ) ರಾಜ್ಯ ಘಟಕ ಅಧ್ಯಕ್ಷ ಮುನಿಆಂಜಿನಪ್ಪ ಒತ್ತಾಯಿಸಿದರು.
ದೇವನಹಳ್ಳಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
23ವರ್ಷದ ಪದವೀಧರ ಯುವತಿ ಭಾಗ್ಯಶ್ರೀ ನಾಪತ್ತೆಯಾಗಿರುವ ಬಗ್ಗೆ ಸೆ.3ರಂದು ಯುವತಿ ತಂದೆ ಕೃಷ್ಣಪ್ಪ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡರೂ ಸಕಾಲದಲ್ಲಿ ತನಿಖೆ ನಡೆಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಚೈನ್ಸ್ ಎಂಟರ್ ಪ್ರೈಸಸ್ ಫೈನಾನ್ಸ್ ಕಂಪನಿಯಲ್ಲಿ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ₹5 ಲಕ್ಷ ಹಣವನ್ನು ನಿಗದಿತ ಬ್ಯಾಂಕಿಗೆ ಕಟ್ಟುವ ಸಲುವಾಗಿ ಹಣದೊಂದಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಯುವತಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಂದ ತಿಳಿದು ಬಂದಿದೆ ಎಂದರು.
ಗೌರಿಬಿದನೂರು ತಾಲ್ಲೂಕು ಟಿ.ವಾಟದ ಹೊಸಹಳ್ಳಿ ಗ್ರಾಮದ ಮೋರಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಕುತ್ತಿಗೆಗೆ ವೈರ್ ಬಿಗಿದು ಹತ್ಯೆ ಮಾಡಲಾಗಿದ್ದು, ಇದರ ಹಿಂದೆ ವ್ಯವಸ್ಥಿತ ತಂಡವಿದೆ. ಇದು ಒಬ್ಬರಿಂದ ಸಾಧ್ಯವಿಲ್ಲ. ಯುವತಿ ಕುಟುಂಬಕ್ಕೆ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಜತೆಗೆ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಗ್ರಹಿಸಿದರು.
ಪಿವಿಸಿ ವಿಭಾಗೀಯ ಅಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಘಟಕ ಅಧ್ಯಕ್ಷ ಹನುಮಣ್ಣ ಗುಳ್ಯಾ, ಉಪಾಧ್ಯಕ್ಷ ದಾಸಪ್ಪ, ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಮಧು ಪ್ರಕಾಶ್, ತಾಲ್ಲೂಕು ಘಟಕ ಅಧ್ಯಕ್ಷ ಎನ್. ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಘಟಕ ಕಾರ್ಯದರ್ಶಿ ನರಸಮ್ಮ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.