ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಜನರು ಶೋಷಿತರ ‍ಧ್ವನಿಯಾಗಿ’

ಮಹರ್‌ ಸೈನಿಕರ ಸ್ಮರಣೆಯಲ್ಲಿ ಕೊರೆಗಾಂವ್‌ ವಿಜಯೋತ್ಸವ
Last Updated 3 ಜನವರಿ 2021, 3:11 IST
ಅಕ್ಷರ ಗಾತ್ರ

ಆನೇಕಲ್: ಯುವಕರು ಸಮಾಜದ ಆಸ್ತಿ. ಹಾಗಾಗಿ ಅಡ್ಡ ದಾರಿ ಹಿಡಿಯದೆ ಅಂಬೇಡ್ಕರ್‌ ಆದರ್ಶ, ಚಿಂತನೆ ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸಮತಾ ಸೈನಿಕ ದಳದ ರಾಷ್ಟ್ರೀಯ ಸಂಯೋಜಕ ಮಹಾರಾಷ್ಟ್ರದ ಸುನೀಲ್‌ ಸಾರಿಪುತ್ರ ತಿಳಿಸಿದರು.

ತಾಲ್ಲೂಕಿನ ಸರ್ಜಾಪುರ ಸಮೀಪದ ದಮ್ಮಗಿರಿಯಲ್ಲಿ ಸಮತಾಸೈನಿಕ ದಳದ ವತಿಯಿಂದ ಆಯೋಜಿಸಿದ್ದ ಕೊರೆಗಾಂವ್‌ ವಿಜಯೋತ್ಸವದಲ್ಲಿ ಮಾತನಾಡಿದರು.

ಹೊಸ ವರ್ಷ ಕೇವಲ ಮೋಜು ಮಸ್ತಿಯಲ್ಲಿ ಕಳೆಯದೇ ಶೋಷಿತರ ಪರವಾಗಿ ದನಿ ಎತ್ತಿದ್ದ ಮಹರ್‌ ಸೈನಿಕರ ಸ್ಮರಣೆಯಲ್ಲಿ ಕೊರೆಗಾಂವ್‌ ವಿಜಯೋತ್ಸವದ ಮೂಲಕ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮತಾ ಸೈನಿಕ ದಳ ಪಥಸಂಚಲನ ಆಯೋಜಿಸಿರುವುದು ಜಾಗೃತಿಗೆ ಬಲ ನೀಡಿದೆ ಎಂದರು.

ದಕ್ಷಿಣ ಭಾರತದಲ್ಲಿ ಸಮತಾ ಸೈನಿಕ ದಳದ ಶಾಖೆ ವಿಸ್ತರಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ವಿವಿಧ ಕಾರ್ಯ ಕ್ರಮ ರೂಪಿಸಲಾಗುವುದು. ಈ ಮೂಲಕ ಯುವಕರು ಶೋಷಿತರ ದನಿಯಾಗಿ ಸ್ವಾಭಿಮಾನಿಗಳಾಗಿ ಬೆಳೆಯಲು ಮಾರ್ಗದರ್ಶನ ನೀಡಲಾಗುವುದು ಎಂದರು.

ಸಮಾಜ ಪರಿವರ್ತನೆ ವೇದಿಕೆ ಅಧ್ಯಕ್ಷ ಬಿ.ಗೋಪಾಲ್‌ ಮಾತನಾಡಿ, ಶೋಷಿತರು ಮತ್ತು ದಲಿತರು ಶಿಕ್ಷಣ, ಸಂಘಟನೆ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಪಥದತ್ತ ಸಾಗಬೇಕು. ಅಂಬೇಡ್ಕರ್‌ ನೀಡಿದ ಸಂವಿಧಾನದ ಫಲವಾಗಿ ಪ್ರತಿಯೊಬ್ಬರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಹಾಗಾಗಿ ಅಂಬೇಡ್ಕರ್‌ ಅವರ ಶಿಕ್ಷಣ, ಸಂಘಟನೆ, ಹೋರಾಟ ಮೂರು ಮೂಲಮಂತ್ರ ಅಳವಡಿಸಿಕೊಳ್ಳಬೇಕು ಎಂದರು.

ಜಾತಿ ಪದ್ಧತಿ, ಅಸ್ಪೃಶ್ಯತೆ ಮೂಲಕ ಅತ್ಯಂತ ಶೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್‌ ಮತ್ತು ಪೇಶ್ವೆಗಳ ವಿರುದ್ಧ ನಡೆದ ಯುದ್ಧದಲ್ಲಿ ಮಹರ್‌ ಸಮುದಾಯ ಹೋರಾಟ ಮಾಡಿ ಜಯಗಳಿಸಿದ ವಿಜಯೋತ್ಸವ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಹತ್ವವಾಗಿದೆ ಎಂದರು.

ಸರ್ಜಾಪುರದಿಂದ ದಮ್ಮಗಿರಿವರೆಗೆ ಪಥಸಂಚಲನ ಆಯೋಜಿಸಲಾಗಿತ್ತು. ಕೊರೆಗಾಂವ್‌ ಬಗ್ಗೆ ಅರಿವು ಮೂಡಿಸುವ ಪುಸ್ತಕ ಬಿಡುಗಡೆ ಮಾಡಲಾಯಿತು. ಕೊರೆಗಾಂವ್‌ ವಿಜಯೋತ್ಸವದ ಸಂಕೇತವಾಗಿ ದಮ್ಮಗಿರಿಯಲ್ಲಿ ವಿಜಯಸ್ತಂಭ ಸ್ಥಾಪನೆ ಮಾಡಲಾಯಿತು. ಬೋಧಿ ರತ್ನ ಬಂತೇಜಿ, ನಯನಲೋಕ ಬಂತೇಜಿ, ಮುಖಂಡರಾದ ಪಟಾಪಟ್‌ ನಾಗರಾಜು, ವೈ.ಪ್ರಕಾಶ್‌ ಪಟಾಪಟ್‌, ಕೋಲಾರ ಮುನಿವೆಂಕಟಪ್ಪ, ಆನಂದ ಚಕ್ರವರ್ತಿ, ಸಿ.ರಾವಣ, ವೆಂಕಟೇಶ್‌ ಮೂರ್ತಿ, ನಾಗರಾಜ ಮೌರ್ಯ, ನಂದಕುಮಾರ್‌, ವಿಜಯಕುಮಾರಿ, ತ್ರಿಪುರ ಸುಂದರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT