ಶನಿವಾರ, ಸೆಪ್ಟೆಂಬರ್ 25, 2021
22 °C

ಬಸವನಬಾಗೇವಾಡಿಯಲ್ಲಿ ಜಾತ್ರೆ ಸಂಭ್ರಮ

ಪ್ರಕಾಶ ಎನ್.ಮಸಬಿನಾಳ Updated:

ಅಕ್ಷರ ಗಾತ್ರ : | |

Prajavani

ಬಸವನಬಾಗೇವಾಡಿ: 12ನೇ ಶತಮಾನದಲ್ಲಿ ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಿಕೊಟ್ಟ ಬಸವಣ್ಣನ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

ಆ.19 ರಿಂದ 22ರ ವರೆಗೆ ನಡೆಯಲಿರುವ ಜಾತ್ರೆಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಜಾತ್ರಾ ಉತ್ಸವ ಸಮಿತಿ, ರಾಷ್ಟ್ರೀಯ ಬಸವ ಸೈನ್ಯ ಕಾರ್ಯಕರ್ತರು, ಬಸವ ಭಕ್ತರು ಜಾತ್ರೆಗೆ ಬರುವ ಭಕ್ತರ ವಸತಿ, ದಾಸೋಹ ವ್ಯವಸ್ಥೆ ಸೇರಿದಂತೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನಂದಿ ಮೂರ್ತಿಗೆ ಅಭಿಷೇಕ ನಡೆಯುತ್ತಿದ್ದು, ನೂರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ದೂರದ ಊರುಗಳ ಭಕ್ತರು ಅಭಿಷೇಕ ಮಾಡಿಸಿ, ದೀಡ್ ನಮಸ್ಕಾರ ಹಾಕಿ, ನೈವೇದ್ಯ ಅರ್ಪಿಸುವ ಮೂಲಕ ಹರಕೆ ತೀರಿಸುತ್ತಿದ್ದಾರೆ.

ದೀಪಾಲಂಕಾರ: ಜಾತ್ರೆಯ ಅಂಗವಾಗಿ ಬಸವೇಶ್ವರ ದೇವಸ್ಥಾನ, ಬಸವ ವೃತ್ತಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ವೃತ್ತದಲ್ಲಿನ ಕಾರಂಜಿ ಗಮನ ಸೆಳೆಯುತ್ತಿದೆ.

ಬಸವೇಶ್ವರ ದೇವಸ್ಥಾನ ಮುಂಭಾಗ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಸುಮಾರು ₹25 ಲಕ್ಷ ವೆಚ್ಚದಲ್ಲಿ ಸಜ್ಜುಗೊಂಡಿರುವ ಬೀದಿ ದೀಪ, ಬೀದಿ ಬದಿಯ ಅಲಂಕಾರಿಕ ದೀಪಗಳು ಜಗಮಗಿಸುತ್ತಿವೆ.
ಇಲ್ಲಿನ ಜೇನುಗೂಡು ಸಂಘದ ಸದಸ್ಯರು ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಭಕ್ತರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದ್ದಾರೆ.

ಪಲ್ಲಕ್ಕಿ ಉತ್ಸವ: ಆ.19ರ ಸೋಮವಾರ ಬೆಳಿಗ್ಗೆ ಜಾತ್ರೆಗೆ ಚಾಲನೆ ಸಿಗುತ್ತಿದ್ದಂತೆಯೇ ಆರಂಭವಾಗುವ ಪಲ್ಲಕ್ಕಿ ಉತ್ಸವವು ಸುಮಾರು 15 ಕಿ.ಮೀ ನಡೆಯುತ್ತದೆ. ಹೋರಿಮಟ್ಟಿ ಗುಡ್ಡದ ದೇವಸ್ಥಾನ, ಬಸವನಹಟ್ಟಿ, ಬುತ್ತಿ ಬಸವಣ್ಣ ದೇವಸ್ಥಾನದ ಮೂಲಕ ಸಂಜೆ ಪಟ್ಟಣಕ್ಕೆ ಬರುವ ಪಲ್ಲಕ್ಕಿಯನ್ನು ವಿವಿಧ ಕಲಾ ತಂಡ, ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುತ್ತದೆ.

ಪಲ್ಲಕ್ಕಿ ಉತ್ಸವದೊಂದಿಗೆ ಬಸವನಹಟ್ಟಿ ಬಸವೇಶ್ವರ ದೇವಸ್ಥಾನದ ಕಳಸವನ್ನು ಇಲ್ಲಿನ ಶಿವಪ್ಪ ಬಸಲಿಂಗಪ್ಪ ಮೋದಿ ಅವರ ಮನೆಯಿಂದ ತೆಗೆದುಕೊಂಡು ಹೋಗುವುದಕ್ಕೆ ಎರಡು ಶತಮಾನಗಳ ಇತಿಹಾಸವಿದೆ.

‘ಬಸವೇಶ್ವರ ದೇವಸ್ಥಾನದಲ್ಲಿ ಬೆಳ್ಳಿ ನಂದಿ ಮೂರ್ತಿಗೆ ಪೂಜೆ ನೆರವೇರುತ್ತದೆ. ನಂತರ ಪಲ್ಲಕ್ಕಿ ಉತ್ಸವದೊಂದಿಗೆ ಮೋದಿ ಅವರ ಮನೆಗೆ ಬರುವ ಭಕ್ತರು ಕಳಸಕ್ಕೆ ಪೂಜೆ ಸಲ್ಲಿಸುತ್ತಾರೆ. ಇದಾದ ಬಳಿಕ ಬಸವರಾಜ ನಿಡಗುಂದಿ ಅವರು ಕಳಸವನ್ನು ತಲೆ ಮೇಲೆ ಹೊತ್ತುಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ಹೋರಿಮಟ್ಟಿ ಗುಡ್ಡಕ್ಕೆ ತೆರಳುತ್ತಾರೆ’ ಎಂದು ರಾಜು ಮೋದಿ ತಿಳಿಸಿದರು.

ಬುತ್ತಿ ಜಾತ್ರೆ: ಸಂಜೆ ಬುತ್ತಿ ಬಸವೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ಬರುತ್ತಿದ್ದಂತೆ ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿದ ನಂತರ ಕೊಟ್ರಶೆಟ್ಟಿ ಮನೆತನದವರು ಮನೆಯಿಂದ ತಂದ ಬುತ್ತಿಯನ್ನು ಭಕ್ತರಿಗೆ ಉಣಬಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು