ಮಂಗಳವಾರ, ಮಾರ್ಚ್ 2, 2021
19 °C

1,200 ‘ಕೊರೊನಾ ಸೇನಾನಿ’ಗಳಿಗೆ ಲಸಿಕೆ ನೀಡಲು ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್–19 ಲಸಿಕೆ ವಿತರಣೆ ಅಭಿಯಾನಕ್ಕೆ ಜಿಲ್ಲೆಯಲ್ಲಿ ಜ.16 (ಶನಿವಾರ) ಚಾಲನೆ ದೊರೆಯಲಿದೆ. ಮೊದಲ ಹಂತದಲ್ಲಿ ‘ಕೊರೊನಾ ಸೇನಾನಿ’ಗಳಾದ ಆರೋಗ್ಯ ಸೇವಾ ಸಿಬ್ಬಂದಿಗೆ ನೀಡಲಾಗುತ್ತಿದೆ.

‘ಮೊದಲ ದಿನ ಜಿಲ್ಲೆಯ 12 ಕೇಂದ್ರಗಳಲ್ಲಿ ತಲಾ 100ರಂತೆ ಒಟ್ಟು 1,200 ಮಂದಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ ನಿಗದಿತ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋ–ವಿನ್ ಆ್ಯಪ್‌ನಲ್ಲಿ ನೋಂದಾಯಿಸುವ ಪ್ರಕ್ರಿಯೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಆಗಿ ಚಾಲನೆ ನೀಡಿದ ಬಳಿಕ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಚಿವರು, ಶಾಸಕರು ಮೊದಲಾದ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಮತ್ತು ಜಿಲ್ಲಾ ಲಸಿಕಾ ಅಧಿಕಾರಿ ಡಾ.ಈಶ್ವರ ಗಡಾದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ ಜಿಲ್ಲೆಗೆ 10ಸಾವಿರ ಡೋಸ್ ಲಸಿಕೆ ಬಂದಿವೆ. ಅದನ್ನು 10ಸಾವಿರ ಮಂದಿಗೆ ನೀಡಲಾಗುವುದು. ಹಂತ ಹಂತವಾಗಿ ಈ ಪ್ರಕ್ರಿಯೆ  ನಡೆಯುತ್ತದೆ. ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ದಾಖಲಾತಿ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ನಗರದ ಜಿಲ್ಲಾಸ್ಪತ್ರೆ, ವಂಟಮೂರಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಥಣಿ ಹಾಗೂ ಹುಕ್ಕೇರಿ ತಾಲ್ಲೂಕು ಆಸ್ಪತ್ರೆಗಳು, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಖಾನಾಪುರ, ರಾಯಬಾಗ, ರಾಮದುರ್ಗ ಹಾಗೂ ಸವದತ್ತಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಗೋಕಾಕ ತಾಲ್ಲೂಕಿನ ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಭಿಯಾನ ಆರಂಭಗೊಳ್ಳಲಿದೆ. ಪ್ರತಿ ಕೇಂದ್ರದಲ್ಲೂ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲಾಗುವುದು. ಕೇಂದ್ರದಿಂದ ಪೂರೈಕೆಯಾಗಿರುವ ‘ಕೋವಿಶೀಲ್ಡ್’ ಲಸಿಕೆ ಕೊಡಲಾಗುವುದು ಎಂದು ವಿವರಿಸಿದರು.

ಲಸಿಕೆ ಪಡೆದವರನ್ನು, ಮುಂಜಾಗ್ರತಾ ಕ್ರಮವಾಗಿ ಅರ್ಧ ಗಂಟೆವರೆಗೆ ಕೇಂದ್ರದಲ್ಲೆ ಇರಿಸಿಕೊಂಡು ನಿಗಾ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಹಂತ ಹಂತವಾಗಿ ಒಟ್ಟು 176 ಕೇಂದ್ರಗಳಲ್ಲಿ 30ಸಾವಿರ ಆರೋಗ್ಯ ಸೇವಾ ಸಿಬ್ಬಂದಿ, ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಯೋಜಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು