ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ವಿದ್ಯಾಗಮ, 30 ಮಕ್ಕಳಿಗೆ ಕೋವಿಡ್‌ ದೃಢ

ಶಿಕ್ಷಕರಿಗೆ ನಿರ್ಬಂಧ ವಿಧಿಸಿದ ಗ್ರಾಮಸ್ಥರು
Last Updated 9 ಅಕ್ಟೋಬರ್ 2020, 16:52 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಎಂ. ತಿಮ್ಮಾಪುರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸುತ್ತಿದ್ದ ‘ವಿದ್ಯಾಗಮ’ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಕನ್ನಡ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ 30 ವಿದ್ಯಾರ್ಥಿಗಳಿಗೆ ಶುಕ್ರವಾರ ಕೋವಿಡ್‌–19 ದೃಢಪಟ್ಟಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವವಾಗಿದೆ.

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ‘ವಿದ್ಯಾಗಮ’ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ.

ಕೊರೊನಾ ಸೋಂಕು ಹರಡುತ್ತಿರುವ ಕಾರಣದಿಂದ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇತ್ತೀಚೆಗೆ ಅಲ್ಲಿ ರ‍್ಯಾಪಿಡ್ ಟೆಸ್ಟ್‌ ನಡೆಸಿದ್ದರು. ಈ ವೇಳೆ, ಗ್ರಾಮದ 6 ಮಂದಿ ಹಾಗೂ ಶಾಲೆಯ 30 ಮಕ್ಕಳಿಗೆ ಕೋವಿಡ್–19 ದೃಢಪಟ್ಟಿದೆ. ಈ ಮಕ್ಕಳು 2, 3 ಹಾಗೂ 4ನೇ ತರಗತಿಯವರಾಗಿದ್ದಾರೆ.

ಈ ಶಾಲೆಯಲ್ಲಿ 195 ಮಕ್ಕಳಿದ್ದಾರೆ. 10ರಿಂದ 12 ಮಕ್ಕಳ ತಂಡ ರಚಿಸಿಕೊಂಡು ಶಿಕ್ಷಕರು ಅಲ್ಲಿನ ಸಾರ್ವಜನಿಕ ಸ್ಥಳಗಳು, ದೇವಸ್ಥಾನ ಮೊದಲಾದ ಆರು ಕಡೆಗಳಲ್ಲಿ ವಿದ್ಯಾಗಮ ಯೋಜನೆಯಡಿ ಶಿಕ್ಷಣ ನೀಡುತ್ತಿದ್ದರು.

ಮಕ್ಕಳಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಅವರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗಿದೆ ಎಂದು ದೂರಿದ್ದಾರೆ. ‘ಶಿಕ್ಷಕರು ಸದ್ಯಕ್ಕೆ ಗ್ರಾಮಕ್ಕೆ ಬರುವಂತಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಸೋಂಕು ದೃಢಪಟ್ಟಿರುವ ಮಕ್ಕಳಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಮನೆಯಲ್ಲಿಯೇ ಅವರಿಗೆಲ್ಲ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಶಿಕ್ಷಕರಲ್ಲಿ ಯಾರಿಗೂ ಸೋಂಕು ದೃಢಪಟ್ಟಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಆಲಾಸೆ ಮಾಹಿತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಆನಂದ ಪುಂಡಲೀಕ, ‘ಇಲಾಖೆಯ ನಿರ್ದೇಶನದ ಮೇರೆಗೆ ಹಾಗೂ ಮಾರ್ಚಸೂಚಿಗಳ ಪ್ರಕಾರ ವಿದ್ಯಾಗಮ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ತಿಮ್ಮಾಪುರದಲ್ಲಿ ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು ಹೇಗೆ ಹಾಗೂ ಅಲ್ಲಿ ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸಲಾಗಿತ್ತೇ ಇಲ್ಲವೇ, ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT