ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ತಿಂಗಳಲ್ಲಿ 3,211 ವಿಮಾನ ಹಾರಾಟ: ಗಮನಸೆಳೆದ ಬೆಳಗಾವಿ ಏರ್‌ಪೋರ್ಟ್‌

‘ಸಕ್ರಿಯ ನಿಲ್ದಾಣ’
Last Updated 19 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣವು ತಿಂಗಳಿಂದ ತಿಂಗಳಿಗೆ ಹೆಚ್ಚು ‘ಸಕ್ರಿಯ ನಿಲ್ದಾಣ’ ಎಂಬ ಹೆಸರು ಗಳಿಸುತ್ತಿದೆ. ಆರು ತಿಂಗಳಲ್ಲಿ ಬರೋಬ್ಬರಿ 3,211 ವಿಮಾನಗಳು ಕಾರ್ಯಾಚರಣೆ ಇಲ್ಲಿಂದ ನಡೆದಿರುವುದು ವಿಶೇಷವಾಗಿದೆ.

ನವೆಂಬರ್‌ ತಿಂಗಳೊಂದರಲ್ಲೇ 767 ವಿಮಾನಗಳು ಹಾರಾಡಿದ್ದು, 30,336 ಮಂದಿ ಪ್ರಯಾಣಿಸಿದ್ದಾರೆ. ಜೂನ್‌ನಲ್ಲಿ 391, ಜುಲೈ 450, ಆಗಸ್ಟ್‌ನಲ್ಲಿ 432, ಸೆಪ್ಟೆಂಬರ್‌ನಲ್ಲಿ 519, ಅಕ್ಟೋಬರ್‌ನಲ್ಲಿ 652 ವಿಮಾನಗಳು ಇಲ್ಲಿಂದ ಕಾರ್ಯಾಚರಣೆ ನಡೆಸಿ, ಸಾವಿರಾರು ಪ್ರಯಾಣಿಕರಿಗೆ ಸೇವೆ ಒದಗಿಸಿವೆ. ಈ ಮಾಹಿತಿಯನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಡಿಸೆಂಬರ್‌ನಲ್ಲಿ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

2018ರಲ್ಲಿ ಇದ್ದ ಐದೂ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಭಾಗದ ಜನಪ್ರತಿನಿಧಿಗಳು ಹಾಗೂ ಬಳಕೆದಾರರ ಹೋರಾಟದ ಪರಿಣಾಮ ‘ಉಡಾನ್‌’ ಯೋಜನೆಯಲ್ಲಿ ನಿಲ್ದಾಣ ಸೇರ್ಪಡೆಯಾದ ಬಳಿಕ ಜೀವಕಳೆ ಬಂದಿದೆ. ಫೆಬ್ರುವರಿಯಲ್ಲಿ 752 ವಿಮಾನಗಳು ಹಾರಾಟ ನಡೆಸಿದ್ದವು. ಬಳಿಕ ನವೆಂಬರ್‌ನಲ್ಲಿ ಹೊಸ ದಾಖಲೆಯಾಗಿದೆ.

ಹಲವು ಮಾರ್ಗಗಳಲ್ಲಿ:ಪ್ರಸ್ತುತ ಇಲ್ಲಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ತಲಾ 3, ಮುಂಬೈಗೆ 2, ಪುಣೆ, ಇಂದೋರ್, ಸೂರತ್, ಕಡಪ, ತಿರುಪತಿ, ಮೈಸೂರು, ಚೆನ್ನೈ ಹಾಗೂ ಅಹಮದಾಬಾದ್‌ಗೆ ತಲಾ ಒಂದು ವಿಮಾನ ಕಾರ್ಯಾಚರಣೆ ನಿತ್ಯ ಇದೆ. ಇಲ್ಲಿಂದ ಡಿ.21ರಿಂದ ಸೂರತ್‌ಗೆ ವಿಮಾನ ಹಾರಾಟ ಆರಂಭವಾಗಲಿದೆ. ‘ಉಡಾನ್’ ಯೋಜನೆಯಲ್ಲಿ ‘ಸ್ಟಾರ್‌ ಏರ್‌’ ಕಂಪನಿಯ ವಿಮಾನವು ವಾರದಲ್ಲಿ 3 ದಿನ (ಸೋಮವಾರ, ಬುಧವಾರ ಹಾಗೂ ಶುಕ್ರವಾರ) ಕಾರ್ಯಾಚರಣೆ ನಡೆಸಲಿದೆ. ಬೆಳಗಾವಿಯಿಂದ ಮಧ್ಯಾಹ್ನ 12ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ಸೂರತ್ ತಲುಪಲಿದೆ. ಅಲ್ಲಿಂದ ಸಂಜೆ 5.30ಕ್ಕೆ ನಿರ್ಗಮಿಸಿ, ಸಂಜೆ 6.50ಕ್ಕೆ ಸಾಂಬ್ರಾಗೆ ಬಂದಿಳಿಯಲಿದೆ. ಇದಲ್ಲದೇ, ಇದೇ ಕಂಪನಿಯು ಬೆಂಗಳೂರಿಗೆ ಮತ್ತೊಂದು ವಿಮಾನ ಸೇವೆ ನೀಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕ ಬಳಿಕ ಬೆಳಗಾವಿ ನಿಲ್ದಾಣವು ವಿಮಾನಗಳ ಹಾರಾಟ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇಲ್ಲಿಂದ ವಿಮಾನಗಳ ಕಾರ್ಯಾಚರಣೆ ಜೊತೆಗೆ ಪ್ರಯಾಣಿಕರ ಸಂಖ್ಯೆಯೂ ವೃದ್ಧಿಸುತ್ತಿದೆ. ಜನರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ. ಮತ್ತಷ್ಟು ಮಾರ್ಗಗಳು ಆರಂಭವಾಗುವ ಸಾಧ್ಯತೆ ಇದೆ. ಕೋವಿಡ್–19 ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.’ ಎಂದು ವಿಮಾನನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ತಿಳಿಸಿದರು.

ವಿನಾಯಿತಿ ನಂತರ:ವಿಮಾನಗಳ ಹಾರಾಟ ಹಾಗೂ ಪ್ರಯಾಣಿಸಿದವರ ಸಂಖ್ಯೆಯ ಆಧಾರದಲ್ಲಿ ಈ ನಿಲ್ದಾಣ ಜೂನ್ ತಿಂಗಳಲ್ಲಿ ರಾಜ್ಯದಲ್ಲಿಯೇ 2ನೇ ಸ್ಥಾನ ಗಳಿಸಿತ್ತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಸ್ಥಾನ ಗಳಿಸಿತ್ತು. ಆ ಅವಧಿಯಲ್ಲಿ ಬೆಳಗಾವಿಯಿಂದ 391 ವಿಮಾನಗಳು ಹಾರಾಟ ನಡೆಸಿದ್ದವು, 10,224 ಮಂದಿ ಪ್ರಯಾಣಿಸಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 3ನೇ ಸ್ಥಾನದಲ್ಲಿತ್ತು.

ಕೋವಿಡ್–19‌ ಲಾಕ್‌ಡೌನ್‌ ನಿರ್ಬಂಧದಿಂದ ವಿನಾಯಿತಿ ಸಿಕ್ಕ ನಂತರ ಅಂದರೆ ಮೇ 25ರ ಬಳಿಕ ಇಲ್ಲಿಂದ ವಿಮಾನ ಹಾರಾಟ ಪುನರಾರಂಭವಾಗಿತ್ತು. ಅಂದಿನಿಂದ ಜುಲೈ 31ರವರೆಗೆ 855 ವಿಮಾನಗಳು ಹಾರಾಡಿದ್ದವು, 25,300 ಮಂದಿ ಪ್ರಯಾಣಿಸಿದ್ದರು.

ವಿಮಾನ ಹಾರಾಟ ತರಬೇತಿ ಕೇಂದ್ರ
ಬೆಳಗಾವಿ ವಿಮಾನನಿಲ್ದಾಣ ವ್ಯಾಪ್ತಿಯಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ಸ್ಥಾಪಿಸಲು ಸಿದ್ಧತೆ ನಡೆದಿದೆ.

ಕೇಂದ್ರ ಆರಂಭಿಸುವ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ಜಮೀನು ನೀಡಲು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು ಟೆಂಡರ್ ಕರೆದಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಆರಂಭವಾದಲ್ಲಿ, ಪೈಲಟ್‌ ಆಗುವ ಕನಸು ಹೊಂದಿರುವ ಈ ಭಾಗದ ಯುವಜನರಿಗೆ ಅವಕಾಶದ ಹೆಬ್ಬಾಗಿಲು ತೆರೆದಂತಾಗಲಿದೆ ಎಂದು ಆಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT