21 ಸ್ಥಾನಗಳಿಗೆ 35 ನೌಕರರ ಪೈಪೋಟಿ

ಬುಧವಾರ, ಜೂನ್ 26, 2019
25 °C
ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ನಿರ್ದೇಶಕರ ಚುನಾವಣೆ 13ರಂದು

21 ಸ್ಥಾನಗಳಿಗೆ 35 ನೌಕರರ ಪೈಪೋಟಿ

Published:
Updated:

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಗಳಿಗೆ ಜೂನ್ 13ರಂದು ಚುನಾವಣೆ ನಡೆಯಲಿದೆ.

ನಗರ ಒಳಗೊಂಡಂತೆ ಜಿಲ್ಲೆಯಲ್ಲಿ 62 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಪೈಕಿ 41 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ 21 ಸ್ಥಾನಗಳಿಗೆ ಒಟ್ಟು 35 ಮಂದಿಯಿಂದ ತುರುಸಿನ ಪೈಪೋಟಿ ಕಂಡುಬಂದಿದೆ. ಮತದಾರರಾದ ಸರ್ಕಾರಿ ನೌಕರರ ಮನವೊಲಿಕೆಗೆ ಅಭ್ಯರ್ಥಿಗಳು ಹರಸಾಹಸಪಡುತ್ತಿದ್ದಾರೆ.

ಆರೋಗ್ಯ, ಪ್ರಾಥಮಿಕ ಶಾಲಾ ಶಿಕ್ಷಕರು, ಕೃಷಿ, ಪೊಲೀಸ್, ಎನ್‌ಸಿಸಿ, ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಬಕಾರಿ, ಸಹಕಾರ, ಆರ್ಥಿಕ ಹಾಗೂ ಸಾಂಖ್ಯಿಕ ಇಲಾಖೆ, ನ್ಯಾಯಾಂಗ, ಭೂ ಮತ್ತು ಗಣಿ ವಿಜ್ಞಾನ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಘಗಳ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನೌಕರರು ವಿವಿಧ ಗುಂಪುಗಳನ್ನು ಮಾಡಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಒಟ್ಟು 5,500 ನೌಕರರು ಮತದಾನದ ಹಕ್ಕು ಹೊಂದಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶವಿದೆ. ಮತದಾರರ ಸಂಖ್ಯೆ ಹೆಚ್ಚಿರುವುದರಿಂದ (2,400) ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಯನ್ನು ವಿಶ್ವೇಶ್ವರಯ್ಯ ನಗರದಲ್ಲಿರುವ ಬಿಇಒ ಕಚೇರಿಯಲ್ಲಿ ನಡೆಸಲಾಗುತ್ತಿದೆ.‌ ಅವರಿಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ. ಬಳಿಕ ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ. ನಿವೃತ್ತ ಅಧಿಕಾರಿ ಸಾವಂತ ಚೌಗುಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜೂನ್ 27ರಂದು ತಾಲ್ಲೂಕು ಘಟಕದ ಅಧ್ಯಕ್ಷರ ಚುನಾವಣೆ ನಡೆಯಲಿದೆ. ನಂತರ, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಜುಲೈ 11ಕ್ಕೆ ಚುನಾವಣೆ ನಿಗದಿಯಾಗಿದೆ. ಜಿಲ್ಲಾ ಘಟಕದ 62 ನಿರ್ದೇಶಕರು ಹಾಗೂ ತಾಲ್ಲೂಕು ಘಟಕದ 14 ಅಧ್ಯಕ್ಷರು ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಜಿಲ್ಲಾ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಕಳೆದ ಎರಡು ಅವಧಿಗೆ ಅಂದರೆ 10 ವರ್ಷಗಳಿಂದ ಅಧ್ಯಕ್ಷರಾಗಿ ಜಗದೀಶ ಗೌಡಪ್ಪ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಾರಿ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ 41 ನಿರ್ದೇಶಕರಲ್ಲಿ, ಜಗದೀಶ ಪಾಟೀಲ ನೇತೃತ್ವದ ಗುಂಪಿನವರೇ 31 ಮಂದಿ ಇದ್ದಾರೆ. ಈ ಬಾರಿಯೂ ಅವಿರೋಧ ಆಯ್ಕೆ ನಡೆಯುವುದೇ ಅಥವಾ ಚುನಾವಣೆ ಜರುಗುವುದೇ ಎನ್ನುವುದು ಕುತೂಹಲ ಮೂಡಿಸಿದೆ.

ಪ್ರಚಾರ: ಆರೋಗ್ಯ ಇಲಾಖೆಯ ಕೆ.ಎಸ್. ಸಾವಂತನವರ ಗುಂಪಿನವರು ತಾಲ್ಲೂಕಿನಲ್ಲಿ ಪ್ರಚಾರ ನಡೆಸಿದರು. ಹಿರೇಬಾಗೇವಾಡಿ, ಬೆಂಡಿಗೇರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ‘ಪ್ರಾಮಾಣಿಕ ಮತ್ತು ನೌಕರರ ಸಮಸ್ಯೆಗಳಿಗೆ ದ್ವನಿಯಾಗುವಂತಹ, ಹಿತಾಸಕ್ತಿ ಕಾಪಾಡುವಂತಹ  ವ್ಯಕ್ತಿಗಳಿಗೆ ಮತ ಹಾಕಬೇಕು’ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯ ಎಸ್‌ಡಿಎ ಕೆ.ಎಸ್. ಸಾವಂತನವರ, ಆರೋಗ್ಯ ಸಹಾಯಕಿ ಕುಸಮಾ ಎನ್. ಕುರಬಗೊಂಡ, ಲ್ಯಾಬ್‌ ಟೆಕ್ನೀಶಿಯನ್ ಪಿ.ಜಿ. ತಹಶೀಲ್ದಾರ್‌ ಮತ ಯಾಚಿಸಿದರು. ಹಿರಿಯ ಪುರುಷ ಆರೋಗ್ಯ ಸಹಾಯಕ ಎಸ್.ಬಿ. ಮೇಳೇದ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !