ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 42.17 ಕೋಟಿ ಕಬ್ಬಿನ ಬಿಲ್ ಬಾಕಿ; ಸಕ್ಕರೆ ಸಚಿವ ಶಂಕರ ಪಾಟೀಲ ಮಾಹಿತಿ

Last Updated 28 ಸೆಪ್ಟೆಂಬರ್ 2021, 16:32 IST
ಅಕ್ಷರ ಗಾತ್ರ

ಬೆಳಗಾವಿ: ‘ಸಕ್ಕರೆ ಕಾರ್ಖಾನೆಗಳು ₹ 42.17 ಕೋಟಿ ಕಬ್ಬಿನ ಬಿಲ್ ಪಾವತಿಸುವುದು ಬಾಕಿ ಇದೆ’ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ವಿವಿಧ ಸಭೆಗಳನ್ನು ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ರಾಜ್ಯದಲ್ಲಿ ಒಟ್ಟು 87 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿವೆ. ಅವುಗಳಲ್ಲಿ 64 ಕಾರ್ಖಾನೆಗಳು ಕಾರ್ಯನಿರತವಾಗಿವೆ. 2020-21ನೇ ಕಬ್ಬು ಅರೆಯುವ ಹಂಗಾಮಿನಲ್ಲಿ 440.84 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು 42.94 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿವೆ’ ಎಂದು ಮಾಹಿತಿ ನೀಡಿದರು.

‘ಕಬ್ಬು ಪೂರೈಸಿದ ರೈತರಿಗೆ ಕಬ್ಬಿನ ಬಿಲ್ ಮೊತ್ತ ₹ 1,34,02.22 ಕೋಟಿ ಆಗಿದೆ. ಈ ಪೈಕಿ ₹ 1,34,77.23 ಕೋಟಿ ಪಾವತಿಸಿವೆ. ₹ 42.17 ಕೋಟಿ ಬಾಕಿ ಉಳಿದಿದೆ. ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿ ದರಕ್ಕಿಂತ ಹೆಚ್ಚು ಕಬ್ಬಿನ ಬಿಲ್ ಪಾವತಿಸಿವೆ. ಕಬ್ಬಿನ ಬಿಲ್ ವಸೂಲಾತಿಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ₹69 ಲಕ್ಷ, ಬಾಗಲಕೋಟೆ ಜಿಲ್ಲೆಯ ಹಿರೇಮಪಡಸಲಗಿಯ ಜಮಖಂಡಿ ಶುಗರ್ಸ್‌ ₹ 1.05 ಕೋಟಿ, ಮುಧೋಳದ ನಿರಾಣಿ ಶುಗರ್ಸ್‌ ₹ 5.67 ಕೋಟಿ, ಹಿಪ್ಪರಗಿಯ ಸಾಯಿಪ್ರಿಯ ಶುಗರ್ಸ್‌ ₹ 4.15 ಕೋಟಿ, ಬೀದರ್ ಜಿಲ್ಲೆಯ ಮೊಗದಾಲ ಬೀದರ್ ಕಿಸಾನ್ ಸಾಖರ ಕಾರ್ಖಾನೆ ₹ 2.09 ಕೋಟಿ, ವಿಜಯಪುರ ಜಿಲ್ಲೆಯ ಕಾರಜೋಳದ ಬಸವೇಶ್ವರ ಶುಗರ್ಸ್ ₹ 22.11 ಕೋಟಿ, ಯಾದಗಿರಿ ಜಿಲ್ಲೆಯ ಶಹಾಪುರದ ಕೋರ್ ಗ್ರೀನ್ ಶುಗರ್ಸ್‌ ಮತ್ತು ಫ್ಯುಯೆಲ್ಸ್ ಲಿ. ₹ 6.41 ಕೋಟಿ ಬಿಲ್ ಬಾಕಿ ಉಳಿದುಕೊಂಡಿವೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರವು 2021-22ನೇ ಸಾಲಿನ ಹಂಗಾಮಿಗೆ ಶೇ.10ರಷ್ಟು ಇಳುವರಿ ಇರುವ ಟನ್ ಕಬ್ಬಿಗೆ ₹ 2,900 ಎಫ್‌ಆರ್‌ಪಿ ದರ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಇದು ಎಲ್ಲ ಕಾರ್ಖಾನೆಗಳಿಗೂ ಅನ್ವಯಿಸುತ್ತದೆ’ ಎಂದರು.

ಇದಕ್ಕೂ ಮುನ್ನ, ಕೈಗಾರಿಕಾ ಪ್ರದೇಶದಲ್ಲಿರುವ ರೇಷ್ಮೆ ಸೀರೆ ತಯಾರಿಕಾ ಕಾರ್ಖಾನೆ ಮತ್ತು ಸಿದ್ಧ ಉಡುಪುಗಳ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ ಜವಳಿ ಘಟಕಗಳ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ಪಡೆದರು.

ಕೈಮಗ್ಗ, ಜವಳಿದಾರರು ಮತ್ತು ನೇಕಾರರೊಂದಿಗೆ ಸುವರ್ಣ ವಿಧಾನಸೌಧದಲ್ಲಿ ಸಂವಾದ ನಡೆಸಿ, ಸಮಸ್ಯೆಗಳನ್ನು ಅಲಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕೈಮಗ್ಗ ಮತ್ತು ಜವಳಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆಯನ್ನು ವಿವರಿಸಿದರು. ನೇಕಾರರ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಆಗಿರುವ ಶಾಸಕ ಸಿದ್ದು ಸವದಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ನೀಲಕಂಠ ಮಾಸ್ತಮರಡಿ, ಶಾಸಕ ಮಹಾದೇವಪ್ಪ ಯದವಾಡ, ಸಂಸದೆ ಮಂಗಲಾ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT