ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಎಕರೆಯಲ್ಲಿ 3,500 ಪಪ್ಪಾಯಿ ಸಸಿ ಬೆಳೆದ ರೈತ

Published 22 ಡಿಸೆಂಬರ್ 2023, 5:20 IST
Last Updated 22 ಡಿಸೆಂಬರ್ 2023, 5:20 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ಬಳಿಯ ತಮ್ಮ ಜಮೀನಿನಲ್ಲಿ ಧಾರವಾಡ ತಾಲ್ಲೂಕಿನ ಮದನಬಾವಿಯ ಕೃಷಿಕ ಲಕ್ಷ್ಮಣ ಮಲ್ಲಪ್ಪ ದೊಡವಾಡ ಬೆಳೆದಿರುವ ಪಪ್ಪಾಯಿ ಸಮೃದ್ಧಿವಾಗಿ ಬೆಳೆದಿದ್ದು, ಹೆಚ್ಚು ಲಾಭದ ಕನಸು ಅವರಲ್ಲಿ ಮೊಳಕೆ ಒಡೆದಿದೆ.

‘ಕಬ್ಬು ಕೃಷಿ ಬದಲಾವಣೆ ಮಾಡಿ ಬೆಳೆದಿರುವ ಪಪ್ಪಾಯಿ ಗಿಡಗಳು ಹೆಚ್ಚು ಫಸಲು ನೀಡುತ್ತಿವೆ. ಸದ್ಯ ನಿರೀಕ್ಷಿಸಿದಷ್ಟು ಮಾರುಕಟ್ಟೆಯಲ್ಲಿ ದರ ಇಲ್ಲ. ಕಡಿಮೆ ಲಾಭ ಸಿಗುತ್ತಿದೆ. ಕಬ್ಬು ಬೆಳೆಗಿಂತ ಪರವಾಗಿಲ್ಲ’ ಎಂದು ಲಕ್ಷ್ಮಣ ಹರ್ಷಪಟ್ಟರು.

3,500 ಗಿಡ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಗಡಿಗೆ ಅಂಟಿಕೊಂಡಿರುವ ಸುಮಾರು ಮೂರು ಎಕರೆ ಜಮೀನನ್ನು ಪಪ್ಪಾಯಿ ಕೃಷಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಗಿಡದಿಂದ ಗಿಡಕ್ಕೆ ಐದು ಅಡಿ, ಸಾಲಿನಿಂದ ಸಾಲಿಗೆ ಏಳು ಅಡಿ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ದೊರೆಯುವ ಪಪ್ಪಾಯಿಯ ಉತ್ತಮ ಸಸಿಗಳನ್ನು ತಂದು ನಾಟಿ ಮಾಡಿರುವುದು ಅವರ ಹೆಚ್ಚಿನ ಕೃಷಿ ಆಸಕ್ತಿಗೆ ಸಾಕ್ಷಿಯಾಗಿದೆ.

‘ಸಸಿ ಖರೀದಿ, ಹನಿ ನೀರಾವರಿಗೆಂದು ಈಗಾಗಲೇ ₹3.20 ಲಕ್ಷ ವೆಚ್ಚ ಮಾಡಿದ್ದೇನೆ. ನಾಟಿ ಮಾಡಿದ ಎಂಟು ತಿಂಗಳಿಗೆ ಗಿಡಗಳು ಕಾಯಿ ಬಿಡಲು ಪ್ರಾರಂಭಿಸಿದವು. ಆದರೆ ದರ ಮಾತ್ರ ಸದ್ಯ ಕುಸಿದಿದೆ. ಪ್ರತಿ ಟನ್‌ಗೆ ₹22 ಸಾವಿದಂತೆ ಮಾರಾಟವಾಗುತ್ತಿದ್ದ ಪಪ್ಪಾಯಿ ದರ ಈಗ ₹7ಸಾವಿರಕ್ಕೆ ಕುಸಿದಿದೆ. ತೀವ್ರ ಕುಸಿತದ ಹೊರತಾಗಿಯೂ ಕಂಡಿದ್ದರೂ ಲಾಭ ಇದೆ. ನಾನು ನಿರೀಕ್ಷಿಸಿದಷ್ಟು ಆದಾಯ ಕೈಗೆಟುಕದಂತಾಗಿದೆ’ ಎಂದು ಲಕ್ಷ್ಮಣ ಮಾಹಿತಿ ನೀಡಿದರು.

3 ವರ್ಷ ಬಾಳಿಕೆ: ‘ಸಸಿನೆಟ್ಟು ಗಿಡವಾದ ನಂತರ ಮೂರು ವರ್ಷಗಳ ವರೆಗೆ ಬಾಳಿಕೆ ಬರುತ್ತವೆ. ಕಾಯಿಕಟ್ಟಲು ಒಂದು ವರ್ಷದ ಅವಧಿ ಬೇಕು. ಅನಂತರದ ಎರಡು ವರ್ಷಗಳ ವರೆಗೂ ಕೊಯ್ಲು ಮಾಡಬಹುದು. ಪ್ರತಿ ಹದಿನೈದು ದಿನಗಳಿಗೆ ಕೊಯ್ಲು ಮಾಡಬಹುದಾಗಿದೆ’ ಎಂದು ಅವರು ತಿಳಿಸಿದರು.

‘ಕೊಯ್ಲು ಮಾಡಿದ ಫಸಲನ್ನು ಬೆಳಗಾವಿ, ಮಂಗಳೂರು, ಮುಂಬೈ ಹಾಗೂ ಗೋವಾ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗುವುದು. ಅಲ್ಲಿ ಹೆಚ್ಚು ಬೆಲೆ ಸಿಗುತ್ತದೆ. ಕೈತುಂಬ ಕಾಸು ದೊರಕುತ್ತದೆ’ ಎಂದರು.

‘ಇದರಲ್ಲಿ ವೈವಿಧ್ಯಮಯ ತಳಿಗಳು ಇವೆ. ವೆಲ್ ಕಂ ತಳಿಯ ಪಪ್ಪಾಯಿ ಸಸಿ ನಾಟಿ ಮಾಡಿದ್ದೇನೆ. ಸಸಿಗಳನ್ನು ನಾಟಿ ಮಾಡಿದ ನಂತರ ರಾಸಾಯನಿಕ ಮೇಲು ಗೊಬ್ಬರ ಕೊಡಲಾಗಿದೆ. ನಾಲ್ಕು ದಿನಗಳಿಗೊಮ್ಮೆ ಹನಿ ನೀರಾವರಿ ಮೂಲಕ ಮಿತವಾಗಿ ನೀರುಣಿಸಲಾಗಿದೆ. ಇವೆಲ್ಲ ಕ್ರಮಗಳು ಗಿಡಗಳು ಹೆಚ್ಚು ಕಾಯಿ ಬಿಡಲು ಕಾರಣವಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT