ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ದಿಢೀರ್ ಸ್ಥಳಾಂತರ: ಮಕ್ಕಳಿಗೆ ತೊಂದರೆ

ತ್ರಿಶಂಕು ಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಪೋಷಕರು
Last Updated 4 ಜೂನ್ 2019, 19:45 IST
ಅಕ್ಷರ ಗಾತ್ರ

ರಾಮದುರ್ಗ: ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆದರ್ಶ ವಿದ್ಯಾಲಯದ ಮಕ್ಕಳು ಒಂದು ತಿಂಗಳ ಕಾಲ ಅಧ್ಯಯನದಿಂದ ವಂಚಿತರಾಗಲಿದ್ದಾರೆ. ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಆದರ್ಶ ವಿದ್ಯಾಲಯವನ್ನು 25 ಕಿ.ಮೀ. ದೂರದ ಕಟಕೋಳದಲ್ಲಿರುವ ನೂತನ ಕಟ್ಟಡಕ್ಕೆ ಏಕಾಏಕಿ ಸ್ಥಳಾಂತರಿಸಿರುವುದು ಇದಕ್ಕೆ ಕಾರಣ.

ಈ ವಿದ್ಯಾಲಯದಲ್ಲಿ ಪ್ರವೇಶ ಪಡೆದ ಮಕ್ಕಳು ದೂರದ ಕಟಕೋಳಕ್ಕೆ ಹೋಗಲು ಅನಾನುಕೂಲತೆಗಳು ಹೆಚ್ಚಿರುವುದರಿಂದ ಒಂದು ವಾರದಿಂದ ತರಗತಿಗಳಿಗೆ ಹಾಜರಾಗದೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಾರಿಗೆ ಬಸ್‌ ಪಾಸ್ ದೊರೆಯದೇ ಇರುವುದರಿಂದಾಗಿ ಅವರು ಶಾಲೆಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಪಾಸ್ ದೊರೆಯಲು ತಿಂಗಳು ಸಮಯ ಬೇಕಾಗಿದೆ.

ರಾಮದುರ್ಗದಿಂದ ಕಟಕೋಳಕ್ಕೆ ಆದರ್ಶ ವಿದ್ಯಾಲಯವನ್ನು ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ 2 ದಿನಗಳ ಹಿಂದೆ ವಿದ್ಯಾರ್ಥಿಗಳ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದರು. ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು, ‘ಕಟಕೋಳದ ನೂತನ ಕಟ್ಟಡದಲ್ಲಿಯೇ ಮಕ್ಕಳು ಅಧ್ಯಯನಕ್ಕೆ ಮುಂದಾಗಬೇಕು. ಅಲ್ಲಿನ ನೀರಿನ ಕೊರತೆ, ರಸ್ತೆ ಸುಧಾರಣೆ, ಬಸ್ ಸೌಕರ್ಯ, ಬಸ್ ಪಾಸ್, ಶೌಚಾಲಯ ನಿರ್ಮಾಣವನ್ನು ಒಂದೆರಡು ದಿನಗಳಲ್ಲಿ ದೊರಕಿಸಿಕೊಡಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಆದರೆ, ಪಾಸ್ ಸಿಕ್ಕಿಲ್ಲ.

‘ಶಾಲೆವರೆಗೂ ಬಸ್ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ. ಆದರೆ ಪಾಸ್ ವಿತರಿಸಲು ತಿಂಗಳು ಬೇಕಾಗುತ್ತದೆ’ ಎಂದು ಕೆಎಸ್‍ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ, ಪೋಷಕರು ಹಾಗೂ ಮಕ್ಕಳು ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಮಕ್ಕಳು ಕಲಿಕೆಯಿಂದ ವಂಚಿತರಾಗಲಿದ್ದಾರೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಕ್ಕಳಿಗೆ ನೆರವಾಗಬೇಕು ಎನ್ನುವುದು ಅವರ ಆಗ್ರಹವಾಗಿದೆ.

ಪಟ್ಟಣದಿಂದ ಕಟಕೋಳ ಗ್ರಾಮ 22 ಕಿ.ಮೀ. ದೂರದಲ್ಲಿದೆ. ಕಟಕೋಳದಿಂದ 3 ಕಿ.ಮೀ. ದೂರದಲ್ಲಿ ಆದರ್ಶ ಶಾಲೆಯ ಕಟ್ಟಡ ನಿರ್ಮಿಸಲಾಗಿದೆ. ಮೂಲಸೌಕರ್ಯಗಳಿಲ್ಲದ ಜಾಗದಲ್ಲಿ ಕಟ್ಟಡ ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ ಎಂಬ ಅಸಮಾಧಾನ ಸಾರ್ವಜನಿಕರದಾಗಿದೆ.

‘ಶಾಲೆಯಲ್ಲಿ 300 ವಿದ್ಯಾರ್ಥಿಗಳಿದ್ದಾರೆ. ಶಾಲೆ ಸ್ಥಳಾಂತರಿಸಿದ ನಂತರ, ರಾಮದುರ್ಗದಿಂದ ಬರಬೇಕಾಗಿದ್ದ 150ಕ್ಕೂ ಹೆಚ್ಚಿನ ಮಕ್ಕಳು ಗೈರು ಹಾಜರಾಗುತ್ತಿದ್ದಾರೆ. ಶಾಲೆಯಲ್ಲಿ ಸೇತುಬಂಧು, ಪ್ರಾರಂಭೋತ್ಸವ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತಿದೆ. ಶಾಲೆಗೆ ನೀರಿನ ಪೂರೈಕೆಯ ಕೆಲಸ ನಡೆಯುತ್ತಿದೆ. ತಾತ್ಕಾಲಿಕ ರಸ್ತೆ ಮಾಡಲಾಗಿದೆ’ ಎಂದು ಮುಖ್ಯಶಿಕ್ಷಕ ಐ.ಎಸ್‌. ಸಲಾಖೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳನ್ನು ದೂರದ ಶಾಲೆಗೆ ಕಳುಹಿಸುವುದು ಕಷ್ಟದ ಕೆಲಸ. ಇನ್ನೊಂದು ವರ್ಷ ಶಾಲೆಯನ್ನು ರಾಮದುರ್ಗದಲ್ಲಿಯೇ ನಡೆಸಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿದ, ಬಸ್‌ ವ್ಯವಸ್ಥೆ ಮಾಡಿದ ನಂತರವಷ್ಟೇ ಸ್ಥಳಾಂತರ ಮಾಡಬೇಕಿತ್ತು’ ಎಂದು ಪೋಷಕ ಸಹದೇವ ಪವಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT