ಬುಧವಾರ, ಸೆಪ್ಟೆಂಬರ್ 18, 2019
25 °C
ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ

ಪ್ಯಾರಾ ಬ್ಯಾಂಡ್ಮಿಂಟನ್‌ ಸಾಧಕಿ ಆರತಿ

Published:
Updated:
Prajavani

ಬೆಳಗಾವಿ: ಹುಟ್ಟಿನಿಂದಲೇ ಎಡಗೈ ಕಳೆದುಕೊಂಡಿರುವ ಜಿಲ್ಲೆಯ ಆರತಿ ಪಾಟೀಲ ಪ್ಯಾರಾ ಬ್ಯಾಂಡ್ಮಿಂಟನ್‌ನ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಖಾನಾಪುರ ತಾಲ್ಲೂಕಿನ ನಂದಗಡದ ಅವರು 1996ರ ಸೆ.23ರಂದು ಜನಿಸಿದ್ದಾರೆ. ಅಂಗವಿಕಲೆ ಎಂಬ ಕೊರಗು ಕಾಡಬಾರದು ಎಂಬ ಉದ್ದೇಶದಿಂದ ಚಿಕ್ಕ ವಯಸ್ಸಿನಿಂದಲೇ ಪಾಲಕರು ಅವರನ್ನು ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಂಡರು. ಬ್ಯಾಡ್ಮಿಂಟನ್‌ನಲ್ಲಿ ಇವರಿಗೆ ಹೆಚ್ಚು ಆಸಕ್ತಿ ಇರುವುದನ್ನು ಗಮನಿಸಿ 2009ರಲ್ಲಿ ತರಬೇತಿಗೆ ಸೇರಿಸಿದ್ದರು.

ವಿಕಲತೆಯನ್ನು ಸವಾಲಾಗಿ ಸ್ವೀಕರಿಸಿದ ಆರತಿ ಬ್ಯಾಂಡ್ಮಿಂಟನ್‌ನಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡು ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸುತ್ತಾ ಪೋಷಕರು ಹಾಗೂ ಊರಿಗೆ ಕೀರ್ತಿ ತರುತ್ತಿದ್ದಾರೆ. ಕ್ರೀಡೆಯ ಜೊತೆಗೆ ಬಿ.ಎ. ಪದವಿಯನ್ನೂ ಪೂರ್ಣಗೊಳಿಸಿದ್ದಾರೆ.

ವಿವಿಧ ಸಾಧನೆ: 

ರಾಜ್ಯಮಟ್ಟದ 2 ಬ್ಯಾಡ್ಮಿಂಟನ್‌ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ಅವರು ಎರಡರಲ್ಲೂ ಚಿನ್ನದ ಪದಕ ಬಾಚಿಕೊಂಡಿದ್ದಾರೆ. 19 ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ 10 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. 6 ಅಂತರರಾಷ್ಟ್ರೀಯ ಮಟ್ಟದ ಸಿಂಗಲ್ಸ್‌ ಮತ್ತು ಡಬಲ್ಸ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗಳಿಸಿದ್ದಾರೆ. 

ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ ಒಕ್ಕೂಟದ ಆಟಗಾರರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪ್ರಸ್ತುತ 20ನೇ ರ‍್ಯಾಂಕ್‌ ಪಡೆದಿದ್ದಾರೆ. 2020ರಲ್ಲಿ ನಡೆಯಲಿರುವ ಪ್ಯಾರಾ ಓಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದಾರೆ. ಕಾಲೇಜು‌ ದಿನಗಳಲ್ಲಿ ಓಟಗಾರ್ತಿಯೂ ಆಗಿದ್ದ ಆರತಿ ರಾಷ್ಟ್ರ ಹಾಗೂ ಅಂತರರಾಷ್ಟ್ರ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅಲ್ಲೂ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

6 ಗಂಟೆ ತರಬೇತಿ:

ಸದ್ಯ ಕೊಲ್ಲಾಪುರದಲ್ಲಿ ವಾಸವಾಗಿದ್ದಾರೆ. ಸೊಲ್ಲಾಪುರದ ಸುನೀಲ ದೇವಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

‘ವಿದೇಶಗಳಲ್ಲಿ ನಡೆಯುವ ಅಂತರರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರ್ಥಿಕ ಚೈತನ್ಯವಿಲ್ಲ. ಸಂಬಂಧಿಕರ ಬಳಿ ಹಾಗೂ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದೇವೆ. ಯಾರಾದರೂ ಪ್ರಾಯೋಜಕರು, ದಾನಿಗಳು ಆರ್ಥಿಕವಾಗಿ ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ: 9975193860.

Post Comments (+)