ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯಕ್ರಿಯೆಗೆ ಬಾರದ ವಿದೇಶದಲ್ಲಿರುವ ಮಕ್ಕಳು: ಚಿಕ್ಕೋಡಿಯಲ್ಲಿ ಅಮಾನವೀಯ ಘಟನೆ

Published 27 ಆಗಸ್ಟ್ 2023, 16:22 IST
Last Updated 27 ಆಗಸ್ಟ್ 2023, 16:22 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪಾರ್ಶ್ವವಾಯುವಿಗೆ ಒಳಗಾಗಿ ಮೃತಪಟ್ಟಿದ್ದ ಮಹಾರಾಷ್ಟ್ರದ ಪುಣೆ ಮೂಲದ ವೃದ್ಧರೊಬ್ಬರ ಅಂತ್ಯಕ್ರಿಯೆಗೆ ವಿದೇಶಗಳಲ್ಲಿ ನೆಲೆಸಿರುವ ಅವರ ಮಕ್ಕಳು ಬರಲು ನಿರಾಕರಿಸಿದ್ದರಿಂದ ಸ್ಥಳೀಯ ಪೊಲೀಸರು, ಅಧಿಕಾರಿಗಳೇ ಸೇರಿ ಶನಿವಾರ ರಾತ್ರಿ ನೆರವೇರಿಸಿದರು.

ಮೂಲಚಂದ್ರ ಶರ್ಮಾ (72) ಅವರಿಗೆ ಚಿಕಿತ್ಸೆ ಕೊಡಿಸಲು ತಾಲ್ಲೂಕಿನ ನಾಗರಮುನ್ನೋಳಿಯ  ಆಸ್ಪತ್ರೆಗೆ ಒಂದೂವರೆ ತಿಂಗಳ ಹಿಂದೆ ಕರೆತರಲಾಗಿತ್ತು. ಆದರೆ ಅವರನ್ನು ಕರೆತಂದ ವ್ಯಕ್ತಿ, ಅಲ್ಲಿನ ಲಾಡ್ಜ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಈ ವಿಷಯ ಪಿಎಸ್ಐ ಬಸಗೌಡ ನೇರ್ಲಿ ಹಾಗೂ ಚಿಕ್ಕೋಡಿ ಪೊಲೀಸ್‌ ಠಾಣೆ ಸಿಬ್ಬಂದಿ ಗಮನಕ್ಕೆ ಬಂದಿತು. ಅವರು ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ವೃದ್ಧರು ಮೃತಪಟ್ಟರು. ಅಂತ್ಯಕ್ರಿಯೆಗೆ ಮಕ್ಕಳು ಬಾರದ್ದರಿಂದ ಪೊಲೀಸರು, ನಾಗರಮುನ್ನೋಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಒ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.

‘ಮೂಲಚಂದ್ರ ಶರ್ಮಾ ಅವರನ್ನು ನಾಗರಮುನ್ನೋಳಿಗೆ ಕರೆತಂದವನು ಅವರ ಸಂಬಂಧಿಯಲ್ಲ. ಬದಲಿಗೆ ವೃದ್ಧರ ಆರೈಕೆಗಾಗಿ ಕುಟುಂಬಸ್ಥರೇ ನೇಮಿಸಿದ್ದ ಗುತ್ತಿಗೆ ನೌಕರನಾಗಿದ್ದ. ತನ್ನ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ, ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಸ್ಥಳೀಯರು ಇದನ್ನು ನಮ್ಮ ಗಮನಕ್ಕೆ ತಂದ ಬಳಿಕ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದೆವು’ ಎಂದು ಪಿಎಸ್ಐ ಬಸಗೌಡ ನೇರ್ಲಿ ಹೇಳಿದರು.

‘ನಾನು ಅನಾಥನಲ್ಲ. ಬ್ಯಾಂಕ್‌ವೊಂದರ ನಿವೃತ್ತ ವ್ಯವಸ್ಥಾಪಕ. ನನ್ನ ಮಗಳು ಕೆನಡಾದಲ್ಲಿದ್ದಾಳೆ. ಮಗ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾನೆ. ನನ್ನನ್ನು ಇಲ್ಲಿನ ಆಸ್ಪತ್ರೆಗೇಕೆ ಕರೆದುಕೊಂಡು ಹೋಗುತ್ತೀದ್ದೀರಿ ಎಂದು ವೃದ್ಧರು ಪ್ರಶ್ನಿಸಿದ್ದರು. ಬಳಿಕ ನಾವು ವೃದ್ಧರ ಮಗ ಮತ್ತು ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಮಗಳಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿದೆವು. ಅದಕ್ಕೆ ಅವರು, ‘ನಮ್ಮ ತಂದೆ ಮೊದಲು ಇದ್ದರು. ಈಗ ಇಲ್ಲ. ಅವರಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸುವಂತೆ ನಾವೇನು ನಿಮಗೆ ಹೇಳಿಲ್ಲ. ನಾವು ನೆಮ್ಮದಿಯಿಂದ ಇದ್ದೇವೆ. ವಿನಾಕಾರಣ ತೊಂದರೆ ಕೊಡಬೇಡಿ. ಬೇಕಾದರೆ ಅಂತ್ಯಕ್ರಿಯೆ ನೆರವೇರಿಸಿ ಅಥವಾ ಶವ ಬಿಸಾಕಿ ಎಂದರು’ ಎಂದು ಪಿಎಸ್‌ಐ ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT