ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಮೂಲಸೌಕರ್ಯ ವಂಚಿತ ಅಮಗಾಂವ

ಆರೋಗ್ಯ ಸೇವೆ, ಸಾರಿಗೆ ಸೌಲಭ್ಯದಿಂದಲೂ ದೂರ
Last Updated 3 ಮೇ 2022, 19:30 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಅಮಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮಗಾಂವ ಗ್ರಾಮ ಇಂದಿಗೂ ರಸ್ತೆ, ಶುದ್ಧ ಕುಡಿಯುವ ನೀರು, ವೈದ್ಯಕೀಯ ಸೌಕರ್ಯ, ಪ್ರಾಥಮಿಕ ಶಾಲೆಯ ನಂತರದ ಶಿಕ್ಷಣ, ಸಾರಿಗೆ ಮೊದಲಾದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆೆ.

ಆ ಪ್ರದೇಶದಲ್ಲಿ ವಾಸಿಸುವ ಜನರು ಸುಧಾರಿತ ಜೀವನಕ್ಕೆ ಅವಶ್ಯವಾದ ನಾಗರಿಕ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿರುವ ಅಮಗಾಂವ ಗ್ರಾಮ ಸುತ್ತಮುತ್ತಲೂ ಸಾವಿರಾರು ಎಕರೆ ವ್ಯಾಪಿಸಿರುವ ದಟ್ಟ ಅರಣ್ಯ ಪ್ರದೇಶದಿಂದ ಸುತ್ತುವರಿದಿದೆ. ತಾಲ್ಲೂಕು ಕೇಂದ್ರದಿಂದ 40 ಕಿ.ಮೀ., ಹೋಬಳಿ ಕೇಂದ್ರದಿಂದ 22 ಕಿ.ಮೀ. ಮತ್ತು ಗ್ರಾಮ ಪಂಚಾಯ್ತಿ ಕಚೇರಿಯಿಂದ 16 ಕಿ.ಮೀ. ದೂರದಲ್ಲಿದೆ. ಅಲ್ಲಿನ ಜನಸಂಖ್ಯೆ 500 ಇದೆ. ಬೆಳಗಾವಿ-ಚೋರ್ಲಾ ಹೆದ್ದಾರಿಯ ಚಿಕಲೆ ಕ್ರಾಸ್ ಮೂಲಕ ಚಿಕಲೆ ತಲುಪಿ ಅಲ್ಲಿಂದ ಮಣ್ಣಿನ ರಸ್ತೆಯಲ್ಲಿ 8 ಕಿ.ಮೀ. ಕ್ರಮಿಸಿದರೆ ಆ ಗ್ರಾಮ ಸಿಗುತ್ತದೆ.

ಚಿಕಲೆಯಿಂದ ಅಮಗಾಂವವರೆಗೆ ಸರಿಯಾದ ರಸ್ತೆಯಿಲ್ಲ. ಅಂಬ್ಯುಲನ್ಸ್ ಸಹ ಗ್ರಾಮಕ್ಕೆ ತಲುಪದ ಸ್ಥಿತಿ ಇದೆ. ಕಾರಣ ಈ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಹಳ್ಳ ದಾಟಲು ಸರಿಯಾದ ಸೇತುವೆ ಇಲ್ಲ. ಅಲ್ಲಿ ದೂರವಾಣಿ ಸೌಲಭ್ಯವಿಲ್ಲ. ನಿಯಮಿತ ವಿದ್ಯುತ್ ಸೌಲಭ್ಯವಿಲ್ಲ. ವೈದ್ಯಕೀಯ ಹಾಗೂ ಸಾರಿಗೆ ವ್ಯವಸ್ಥೆಯಂತೂ ಕನಸಿನ ಮಾತು ಎನ್ನುವಂತಾಗಿದೆ.

ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಶಾಲೆ ಇದೆ. ದಟ್ಟ ಅರಣ್ಯದಲ್ಲಿದ್ದರೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ಕೊರತೆ ಜೊತೆಗೆ ಕಾಡು ಪ್ರಾಣಿಗಳ ಹಾವಳಿ ಇದೆ.

‘ನಮ್ಮ ಗ್ರಾಮದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಆಗಾಗ ಮನವಿಗಳನ್ನು ಸಲ್ಲಿಸಲಾಗಿದೆ. ಅಧಿಕಾರಿಗಳು ಹೇಳುವಂತೆ, ನಮ್ಮ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಲು ಮುಂದಾದರೂ ನಿಯಮ ಅಡ್ಡಿಯಾಗಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಭೀಮಗಡ ಸಂರಕ್ಷಿತ ವನ್ಯಧಾಮದ ವ್ಯಾಪ್ತಿಗೆ ಸೇರಿರುವ ಕಾರಣ ವನ್ಯಜೀವಿ ಸಂರಕ್ಷಣಾ ಅಧಿನಿಯಮದಲ್ಲಿ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ’ ಎಂದು ತಿಳಿಸುತ್ತಾರೆ ನಿವಾಸಿ ಅರ್ಜುನ ಗಾವಡಾ.

‘ನಾವೂ ಮನುಷ್ಯರೇ. ನಾಡಿನ ಪ್ರಜೆಗಳೆ. ದೊಡ್ಡ ನಗರಗಳ ಕಾಂಕ್ರೀಟ್‌ ಕಾಡುಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುವ ಸರ್ಕಾರ ನೈಜವಾಗಿ ಕಾಡು ಉಳಿಸಿ–ಬೆಳೆಸುತ್ತಿರುವ ನಮಗೆ ಮೂಲಸೌಕರ್ಯಗಳನ್ನು ನೀಡಲು ಏಕೆ ಹಿಂದೇಟು ಹಾಕುತ್ತದೆ ಎನ್ನುವುದು ಅರ್ಥವಾಗುತ್ತಿಲ್ಲ. ನಮ್ಮ ಸಮಸ್ಯೆ ಅರಿತು ಅಹತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

‘ಅಮಟೆ ಗ್ರಾಮ ಪಂಚಾಯ್ತಿಯಿಂದ ಅಮಗಾಂವ ಗ್ರಾಮದ ಒಳ ರಸ್ತೆಗಳ ಸುಧಾರಣೆ, ಬೀದಿದೀಪ, ಶಾಲಾ ಕೊಠಡಿಗಳ ಅಭಿವೃದ್ಧಿ ಮತ್ತಿತರ ಸೌಲಭ್ಯಗಳನ್ನು ನಮ್ಮಲ್ಲಿರುವ ಅನುದಾನದ ಲಭ್ಯತೆಯ ಆಧಾರದ ಮೇಲೆ ಒದಗಿಸಿದ್ದೇವೆ’ ಎಂದು ಪಿಡಿಒ ಎಂ.ಎಂ. ಮೊಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT